ಮಹದೇಶ್ವರ ಬೆಟ್ಟದಲ್ಲಿ ಮಾಯವಾಗಿದ್ದ ಲಕ್ಷಾಂತರ ಹಣ ವಾಪಸ್

ಹನೂರು ಜು.31:- ಲಾಡು ಪ್ರಸಾದದ ಜತೆ ಅಚಾನಕ್ಕಾಗಿ ಬೆಂಗಳೂರಿನ ಭಕ್ತರೊಬ್ಬರ ಕೈ ಸೇರಿದ್ದ 2ಲಕ್ಷದ 93 ಸಾವಿರ ರೂ ಹಣದ ಕಂತೆಯನ್ನು ಸದರಿ ಭಕ್ತರು ಮ.ಬೆಟ್ಟ ಪೊಲೀಸ್ ಠಾಣೆಗೆ ಆಗಮಿಸಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಂತಿರುಗಿಸಿದ ಪ್ರಕರಣ ಇಂದು ಜರುಗಿದೆ.
ಬೆಂಗಳೂರು ಜಿಲ್ಲೆ ಯಶವಂತಪುರ ತಾಲ್ಲೂಕು ಮೇದರಳ್ಳಿ ನಿವಾಸಿ ನರಸಿಂಹಮೂರ್ತಿಯವರೇ ದೇವಸ್ಥಾನದ ಹಣ ಹಿಂತಿರುಗಿಸಿದವರಾಗಿದ್ದಾರೆ.
ಜು.28 ರಂದು ಭೀಮನ ಅಮಾವಾಸ್ಯೆ ಪ್ರಯುಕ್ತ ನರಸಿಂಹಮೂರ್ತಿ ತಮ್ಮ ಸ್ನೇಹಿತರಾದ ಗಡ್ಕರಿ, ಪ್ರತಾಶ್ ಮತ್ತು ಲಕ್ಷ್ಮಣ ಎಂಬುವರೊಂದಿಗೆ ಮ.ಬೆಟ್ಟಕ್ಕೆ ಆಗಮಿಸಿದ್ದು ಆ ದಿನ ವಿಶೇಷವಾದ್ದರಿಂದ ವಿಪರೀತ ಭಕ್ತ ಸಮೂಹವಿದ್ದ ಕಾರಣ ವಿಶೆಷ ಕೌಂಟರ್‍ನಲ್ಲಿ ತಲಾ 500 ರೂನ ವಿಶೇಷ ಟಿಕೆಟ್ ಪಡೆದು ದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ಟಿಕೆಟ್ ಜತೆಗೆ ವಿಶೇಷ ಟಿಕೆಟ್ ಕೌಂಟರ್‍ನಲ್ಲಿ ಮೂರು ಬ್ಯಾಗ್ ಲಾಡು ಜತೆಗೆ ಮತ್ತೊಂದು ಬ್ಯಾಗ್‍ನಲ್ಲಿ ಲಾಡು ಮಾರಾಟವಾಗಿದ್ದ ಹಣ 2 ಲಕ್ಷದ 93 ಸಾವಿರವನ್ನು ಕೌಂಟರ್‍ನಲ್ಲಿದ್ದ ಹೊರಗುತ್ತಿಗೆ ನೌಕರ ನಾಗಭೂಷಣ ಅಚಾನಕ್ಕಾಗಿ ಕೊಟ್ಟುಬಿಟ್ಟಿದ್ದ.
ಇತ್ತ ದರ್ಶನಕ್ಕೆ ತೆರಳುವ ಭರಾಟೆಯಲ್ಲಿ ಇದಾವುದನ್ನು ಮನಗಾಣದ ನರಸಿಂಹಮೂರ್ತಿ ದರ್ಶನ ಮುಗಿಸಿ ತಾವು ಬಂದಿದ್ದ ಕಾರಿನೊಳಗೆ ಲಾಡು ಪ್ರಸಾದದ ಬ್ಯಾಗಿನೊಟ್ಟಿಗೆ ನೋಟಿನ ಕಂತೆಯಿರುವ ಬ್ಯಾಗನ್ನು ತೆಗೆದುಕೊಂಡು ಅಲ್ಲಿಂದ ಸೀದಾ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ತೆರಳಿ ಅಲ್ಲೂ ದರ್ಶನ ಪಡೆದು ಅಲ್ಲಿಂದಲೂ ಲಾಡು ಪ್ರಸಾದವನ್ನು ಖರೀದಿಸಿ ಬೆಂಗಳೂರು ಬಳಿಯ ಸ್ವ ಗ್ರಾಮಕ್ಕೆ ತೆರಳಿದ್ದರು.
ಅಲ್ಲಿ ಎರಡೂ ದೇಗುಲಗಳಲ್ಲಿ ಖರೀದಿಸಿದ್ದ ಪ್ರಸಾದದ ಬ್ಯಾಗ್‍ಗಳನ್ನು ಪರಿಶೀಲಿಸಿದಾಗ ಮ.ಬೆಟ್ಟದ ಪ್ರಸಾದದ ಬ್ಯಾಗಿನಲ್ಲಿ ನೋಟಿನ ಕಂತೆಯಿರುವುದು ಪತ್ತೆಯಾಯಿತೆನ್ನಲಾಗಿದ್ದು ನಂತರ ದೇವಸ್ಥಾನದ ಆಡಳಿತ ಮಂಡಳಿಗೆ ನಡೆದ ವಿಷಯವನ್ನು ತಿಳಿಸಿ ಇಂದು ಮಧ್ಯಾಹ್ನ ಕೊಳ್ಳೇಗಾಲ ತಾಲ್ಲೂಕು ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿಜಯ ಲಕ್ಷ್ಮಿ ಲಾಡ್ಜ್‍ನ ಪ್ರಭು ಎಂಬುವರ ಜತೆ ಮ.ಬೆಟ್ಟ ಪೊಲೀಸ್ ಠಾಣೆಗೆ ಆಗಮಿಸಿ. ಪೊಲೀಸ್ ಇನ್ಸ್‍ಪೆಕ್ಟರ್ ಬಸವರಾಜುರವರ ಸಮ್ಮುಖದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜುರವರ ಬಳಿ ಹಣದ ಬ್ಯಾಗನ್ನು ಹಸ್ತಾಂತರಿಸಿದರು.
ಅಚಾನ್ಕಕಾಗಿ ಹಣದ ಬ್ಯಾಗ್ ಕಳೆದುಹೋಗಿರುವ ಬಗ್ಗೆ ಮ.ಬೆಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿ ಟಿವಿ ಪೂಟೇಜ್ ಪರಿಶೀಲಿಸಿದಾಗ ಹಣದ ಬ್ಯಾಗ್ ಕೊಂಡೊಯ್ದ ವ್ಯಕ್ತಿಯ ಚಿತ್ರ ಸೆರೆಯಾಗಿತ್ತಾದರೂ ನಿಖರವಾಗಿ ಗುರುತು ಚಹರೆ ಪತ್ತೆಯಾಗಿರಲಿಲ್ಲ. ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿಯವರು, ಬೇಜವಾಬ್ದಾರಿತನದ ಪ್ರತೀಕವಾಗಿ ಹಣದ ಕಳೆದ ಹೊಣೆಯನ್ನು ಅಲ್ಲಿ ಕರ್ತವ್ಯದಲ್ಲಿದ ನೌಕರನಿಗೆ ಹೊರಿಸಿ ಆತನೇ ಹಣ ಪಾವತಿಸುವಂತೆ ಆದೇಶ ನೀಡಿದ್ದರು.