ಮಹದೇಶ್ವರ ಬೆಟ್ಟಕ್ಕೆನಟ ರಾಘವೇಂದ್ರ ಕುಟುಂಬ ಭೇಟಿ

ಚಾಮರಾಜನಗರ,ಅ.೨- ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಕುಟುಂಬ ಸಮೇತ ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಹನೂರು ತಾಲೂಕಿನ ಈ ಸುಪ್ರಸಿದ್ಧ ದೇವಸ್ಥಾನಕ್ಕೆ ರಾಜ್ ಕುಟುಂಬ ಆಗಾಗ್ಗೆ ಬರುತ್ತೆ. ಈ ಬಾರಿ ಕುಟುಂಬ ಸಮೇತ ರಾಘವೇಂದ್ರ ರಾಜಕುಮಾರ್ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್ , ಪತ್ನಿ ಮಂಗಳಾ ಕೂಡ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಾದಪ್ಪನ ದರ್ಶನ ಪಡೆದರು. ಎಲ್ಲರೂ ಪೂಜೆ ಸಲ್ಲಿಸಿ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿದರು.
ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್ ‘ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ಬಂದಿರಲಿಲ್ಲ. ಪುತ್ರ ಯುವ ರಾಜಕುಮಾರ್ ನಟನೆಯ ಚಿತ್ರೀಕರಣ ಮೈಸೂರಿನಲ್ಲಿ ನಡೀತಿದೆ. ಹೀಗಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ ಎಂದರು. ಈ ಜಾಗ ತುಂಬಾ ಚೆನ್ನಾಗಿದೆ. ಮಲೆ ಮಹದೇಶ್ವರ ತಾಣ ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಂದು ಸಲವಾದರೂ ಇಲ್ಲಿಗೆ ಬರಬೇಕು ಅಂತ ಅನ್ನಿಸಿದೆ. ಇನ್ಮೇಲೆ ಮಾದಪ್ಪನ ದರ್ಶನ ಪಡೆಯಲು ಬರುತ್ತೇವೆ ಎಂದು ಹೇಳಿದರು.