ಮಹದೇಶ್ವರ ಪ್ರತಿಮೆಯ ತಡೆಗೋಡೆ ಕುಸಿತ

ಮಹದೇಶ್ವರ ಬೆಟ್ಟ: ಮೇ.13:- ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ ನಿರ್ಮಾಣ ಮಾಡಲಾಗಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆಯ ಮುಂಭಾಗದ ಅಂಗಳದ ತಾತ್ಕಾಲಿಕ ತಡೆ ಗೋಡೆ ಕುಸಿದು ಬಿದ್ದಿದೆ.
ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮಕ್ಕಾಗಿ ವಿಗ್ರಹದ ಸುತ್ತಲೂ ಸಮತಟ್ಟು ಮಾಡಲಾಗಿರುವ ಜಾಗದ ಸುತ್ತಲೂ ಭೂಮಿ ಮಟ್ಟದಿಂದ 20 ಅಡಿಯಷ್ಟು ಎತ್ತರದ ತಡೆಗೋಡೆಯನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿತ್ತು.
ಮಣ್ಣಿಗೆ ನೀರುಣಿಸದೆ ಅದನ್ನು ಬಿಗಿಮಾಡದೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಮೂರ್ನಾಲ್ಕು ದಿನಗಳಿಂದ ಸುರಿದ ಬಾರಿ ಮಳೆಗೆ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ತಡೆಗೋಡೆ ಕೆಳಬಾಗ ನಾಲ್ಕೈದು ಮನೆಗಳಿದ್ದು, ಯಾವುದೇ ಅನಾಹುತವಾಗಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಗ್ರಹ ನಿರ್ಮಾಣ ಯೋಜನೆಯ ಎಂಜಿನಿಯರ್ ಮಾಲತೇಶ್ ಪಾಟೀಲ ಅವರು, ಈ ತಡೆಗೋಡೆಯನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿತ್ತು.
ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾವ ಸಿದ್ದವಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.