ಮಹದೇವಪುರ: ಗ್ರಾಮ ಪಂಚಾಯ್ತಿ ಬಿಜೆಪಿ ವಶ

ಕೆ.ಆರ್. ಪುರ,ಜ.೨- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ಕೇಂದ್ರ ಸರ್ಕಾರದ ಆಡಳಿತ ವೈಖರಿಯೇ ಕಾರಣ ಎಂದು ಎಂದು ಶಾಸಕ ಅರವಿಂದಲಿಂಬಾವಳಿ ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಾಟಂನಲ್ಲೂರು ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು, ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರು ನೀಡುತ್ತಿರುವ ಆಡಳಿತ ವೈಖರಿ ಜನರ ನಂಬಿಕೆಯನ್ನು ಇಮ್ಮಡಿಗೊಳಿಸಿದ್ದು ತಳಮಟ್ಟದಲ್ಲೂ ಬಿಜೆಪಿಗೆ ಒಲವಿದೆ ಎಂಬುದು ಸಾಬೀತಾಗಿದೆ ಎಂದರು.
ಮಹದೇವಪುರ ಕ್ಷೇತ್ರದಲ್ಲಿ ೧೧ ಗ್ರಾಮಪಂಚಾಯಿತಿಗಳಿದ್ದು ಅವುಗಳಲ್ಲಿ ೧೦ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಳೆದ ಅವಧಿಯಲ್ಲಿ ಉತ್ತಮ ಆಡಳಿತ, ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಜನರು ಅಭ್ಯರ್ಥಿಗಳ ಕೈಹಿಡಿದಿದ್ದಾರೆ. ಅಲ್ಲದೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಳೆದ ಬಾರಿ ಆಡಳಿತ ನಡೆಸುತ್ತಿದ್ದ ಪಂಚಾಯಿತಿಗಳ ಅಭಿವೃದ್ದಿ ಗಮನಿಸಿ, ಪಕ್ಕದ ಬೇರೆ ಪಕ್ಷದ ಬೆಂಬಲಿಗರು ಆಡಳಿತ ನಡೆಸುತ್ತಿದ್ದ ಪಂಚಾಯಿತಿಗಳು ಕೂಡ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿರುವುದು ಅತ್ಯುತ್ತಮ ಆಡಳಿತಕ್ಕೆ ಸಂದಜಯ ಎಂದರು. ಪ್ರತಿ ಪಂಚಾಯಿತಿಯಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದರಲ್ಲದೆ ಮಹಿಳೆಯರು ಚುನಾವಣೆಯಲ್ಲಿ ಮೇಲುಗೈ ಸಾಧಿಸಿರುವುದು ಖುಷಿಯ ವಿಚಾರ ಎಂದರು.
ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿಗಳು ಉತ್ತಮ ಕೆಲಸ ಮಾಡಲಿ, ಅಭಿವೃದ್ದಿ ಪೂರಕವಾದ ಕೆಲಸಗಳನ್ನು ಮಾಡಿ ಜನರ ನಂಬಿಕೆ ಉಳಿಸಿಕೊಳ್ಳಿ, ಜನರ ನಂಬಿಕೆ ಗಳಿಸಿಕೊಂಡರೆ ಬಿಜೆಪಿ ಪಕ್ಷ ಮತ್ತಷ್ಟು ಬಲಿಷ್ಟಗೊಳ್ಳಲಿದೆ ಎಂದು ತಿಳಿಸಿದರು…
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ ,ಗ್ರಾಮಾಂತರ ಅಧ್ಯಕ್ಷ ನಟರಾಜ್, ಮುಖಂಡರಾದ ರಾಜಾರೆಡ್ಡಿ, ವೆಂಕಟಸ್ವಾಮಿ ರೆಡ್ಡಿ , ಜ್ಯೋತಿದೇವರಾಜ್ , ಅನಂತರಾಮಯ್ಯ,ನೂತನ ಸದಸ್ಯರಾದ ನಂಜೇಗೌಡ,ಅಶೋಕ್ ಮತ್ತಿತರರು ಹಾಜರಿದ್ದರು..
ಕಣ್ಣೂರುಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಶಾಸಕ ಅರವಿಂದಲಿಂಬಾವಳಿರವರು ಅಭಿನಂದಿಸಿದರು.