ಮಹದೇವತಾತ ಕಲಾಸಂಘದಿಂದ ವಿಶ್ವರಂಗಭೂಮಿ ದಿನಾಚರಣೆ

ಬಳ್ಳಾರಿ, ಮಾ.27: ನಗರದ ನಲ್ಲಚೆರುವಿನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಂದ್ಯಾಳಿನ ಶ್ರೀ ಮಹತೇವತಾತ ಕಲಾ ಸಂಘದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗ ಕಲಾವಿದರಿಗೆ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯರಂಗ ಕಲಾವಿದ ನಾಡೋಜ ಬೆಳಗಲ್ ವೀರಣ್ಣ ಅವರು, ರಂಗಭೂಮಿಯಲ್ಲಿ ತಾವು ಬೆಳೆದು ಬಂದ ರೀತಿ, ರಂಗಭೂಮಿಯ ಇಂದಿನ ಸ್ಥಿತಿಗತಿ ಬಗ್ಗೆ ತಿಳಿಸಿದರು.
ಹಿರಿಯ ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ್ ಅವರು ರಂಗಭೂಮಿ ಕ್ಷೇತ್ರದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಕೊಡುಗೆ, ಇಂದು ರಂಗಭೂಮಿ ಹೊಸ ಆಯಾಮಗಳತ್ತ ಸಾಗುವುದನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ.ಮೋಹನ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ್ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಯಶ್ವಂತ್ ರಾಜ್ ಎನ್ ಅವರುಗಳು ರಂಗಭೂಮಿ ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯರಂಗ ಕಲಾವಿದ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೆಣಿಕೆಹಾಳ್ ನ ತಿಮ್ಮಾನಗೌಡ ಮೇಲು ಸೀಮೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹದೇವತಾತ ಕಲಾಸಂಘದ ಅಧ್ಯಕ್ಷ ಹಂದ್ಯಾಳ್ ಪುರುಷೋತ್ತಮ ಸ್ವಾಗತಿಸಿದರು, ಉಪನ್ಯಾಸಕ ಖಾಸಿಂ ಸಾಬ್ ಕಾರ್ಯಕ್ರಮ ನಿರೂಪಿಸಿದರು. ಆರ್.ಪ್ರಾಣೇಶ್ ವಂದಿಸಿದರು, ಎಱ್ರೆಗೌಡ ಪ್ರಾರ್ಥಿಸಿದರು.