ಮಹದಾಯಿ ವಿಳಂಬಕ್ಕೆ ಕೈ ಪಿತೂರಿ : ಶೆಟ್ಟರ್ ಆರೋಪ

Karnataka Vidhan Sabha Opposition leader Jagadish shettar addressing to media soon after releasing the book on Congress Party (Government) misrule at BJP State office, Malleswaram in Bangalore on Saturday. Photo by Satish Badiger

ಧಾರವಾಡ, ನ ೧: ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಿತೂರಿ ಮಾಡುತ್ತಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಷಯದಲ್ಲಿ ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ಗೆ ರಾಜ್ಯದ ಪರ ಸ್ಪಷ್ಟ ನಿಲುವು ಇಲ್ಲ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದ ಕಾಂಗ್ರೆಸ್ ನಾಯಕರು ಗೋವಾ ರಾಜ್ಯದವರನ್ನು ಎತ್ತಿಕಟ್ಟುತ್ತಿದ್ದಾರೆ. ಗೋವಾದವರಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಒಂದು ಹನಿ ನೀರನ್ನೂ ಬಿಡಬೇಡಿರಿ ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ನಮ್ಮ ರಾಜ್ಯದಲ್ಲಿ ನಮ್ಮ ಪರವಾಗಿ ಹೇಳಿಕೆಗಳನ್ನು ನೀಡಿ ಕುಮ್ಮಕ್ಕು ನಡೆಸಿದ್ದಾರೆ. ಈ ಗೊಂದಲದ ಹೇಳಿಕೆಗಳಿಗೆ ದಿನೇಶ್ ಗುಂಡುರಾವ್ ಅವರು ಸ್ಪಷ್ಟನೆ ನೀಡಬೇಕು. ಅಲ್ಲದೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ಇಂತಹ ಹೇಳಿಕೆಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಈ ರೀತಿಯ ಹೇಳಿಕೆಗಳಿಂದ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ನ್ಯಾಯಾಲಯ ತೀರ್ಪುಗಳನ್ನು ನೀಡುತ್ತಿದ್ದರೂ ಯೋಜನೆ ಅನುಷ್ಠಾನ ವಿಳಂಬಕ್ಕೆ ಕಾಂಗ್ರೆಸ್ ದುರ್ಬುದ್ಧಿಯೇ ಕಾರಣ. ಮಹದಾಯಿ ವಿಚಾರವಾಗಿ ರಾಜ್ಯದಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದರು.
ಅತಿವೃಷ್ಠಿಯಿಂದಾಗಿ ಬೆಳೆ ಹಾನಿ ಸಮೀಕ್ಷೆ, ಪರಿಹಾರ ವಿತರಣೆ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲೆಯ ಗ್ರಾಮೀಣ ಭಾಗದ ಹಾಗೂ ಅವಳಿ ನಗರದ ರಸ್ತೆಗಳ ದುರಸ್ತಿ ಕಾರ್ಯಕ್ಕೂ ಸೂಚಿಸಿದ್ದೇನೆ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಇನ್ನೂ ಚರ್ಚೆಯೇ ಆಗಿಲ್ಲ. ಚುನಾವಣಾ ಪಟ್ಟಿಯೇ ಬಿಡುಗಡೆ ಆಗಿಲ್ಲ. ಅಂದಮೇಲೆ ಅಭ್ಯರ್ಥಿ ಆಯ್ಕೆಯ ಪ್ರಶ್ನೆ ಉದ್ಬವಿಸದು ಎಂದು ಹೇಳಿದರು.
ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯಬಾರದು. ಕೊರೊನಾ ತೊಲಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಚಿವ ಶೆಟ್ಟರ್ ಸಲಹೆ ನೀಡಿದರು.