ಮಹದಾಯಿ: ಬಿಜೆಪಿಯಿಂದ ಜನತೆಗೆ ಮೋಸ-ಸುರ್ಜೇವಾಲಾ

ಹುಬ್ಬಳ್ಳಿ, ಜ 3: ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಜನತೆಗೆ ಮೋಸ ಮಾಡಿದೆ ಇವರ ಚರಿತ್ರೆಯೇ ಮೋಸದಿಂದ ಕೂಡಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಲ-ಜನ ಆಂದೋಲನ ಸಮಾವೇಶದಲ್ಲಿ ಅವರು ಟೀಕಾ ಪ್ರಹಾರ ಮಾಡಿದರು.

ಮಹದಾಯಿ ಯೋಜನೆಗಾಗಿ ಇದುವರೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಸಿಕ್ಕಿಲ್ಲ. ಈಗ ಅಧಿಕಾರ ಅವಧಿ ಮುಗಿಯುವ ಹೊತ್ತಿಗೆ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಮಹದಾಯಿ ನೀರನ್ನು ಇವರಿಂದ ತರಲು ಹಿಂದೆಯೂ ಆಗಿಲ್ಲ, ಆಗುವುದೂ ಇಲ್ಲ ಎಂದರು.
ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಗೆ ಮೋಸ ಮಾಡಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಯೋಜನೆ ಜಾರಿಗೆ ತರುತ್ತೇವೆ ಎಂದರು.

ವಿಪಕ್ಷನಾಯಕ ಸಿದ್ದರಾಮಯ್ಯ ಮಾತನಾಡಿ, ನಾವು ಅಧಿಕಾರಕ್ಕೆ ಬರುವುದು ಶತ:ಸಿದ್ದ. ಬಿಜೆಪಿ ಎಷ್ಟೇ ಅಪಪ್ರಚಾರ, ಆಪರೇಷನ್ ಕಮಲ, ಹಣದ ಹೊಳೆ ಹರಿಸಿದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಮಹದಾಯಿ ತಿರುವು ಯೋಜನೆ ಮುಗಿಸುತ್ತೇವೆ ಎಂದರು.
ಜನರಿಗೆ ಸುಳ್ಳು ಹೇಳುವ, ಲೂಟಿ ಹೊಡೆಯುವ ಸರ್ಕಾರವನ್ನು ಬೇರು ಸಹಿತ ಕಿತ್ತು ಹಾಕಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಈ ರಾಜ್ಯವನ್ನು ಉಳಿಸಿ. ಇದು 40% ಸರ್ಕಾರ. ಬಸವರಾಜ್ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರು.

ದೇಶ ಜೋಡಿಸಲು ರಾಹುಲ್ ಗಾಂಧಿ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮನಸ್ಸು ಜೋಡಿಸುವ ಪಕ್ಷ, ಬಿಜೆಪಿ ಒಡೆಯುವ ಪಕ್ಷ. ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಮಹಿಳೆಯರು ಅಸುರಕ್ಷಿತ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಕೇವಲ ಹಸಿ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು ಈ ಭಾಗದವರಿದ್ದಾರೆ. ಕೇಂದ್ರ, ರಾಜ್ಯ, ಗೋವಾ, ಮಹಾರಾಷ್ಟ್ರದಲ್ಲಿ ನಾಲ್ಕು ಇಂಜಿನ್ ಬಿಜೆಪಿ ಸರ್ಕಾರವಿದೆ. ಇಷ್ಟೆಲ್ಲಾ ಇದ್ದರೂ ಜನರಿಗೆ ಕುಡಿಯಲು ನೀರಲು ಕೊಡಲು ಇವರಿಗೆ ಆಗುವುದಿಲ್ಲ. ಯಾಕಿರಬೇಕು ಈ ಸರ್ಕಾರ ಎಂದು ಹರಿಹಾಯ್ದರು.

ನಮಗೆ ಬಸವಣ್ಣ, ಶಿಶುನಾಳ ಶರೀಫ್, ಕನಕದಾಸ, ಕುವೆಂಪು ಕರ್ನಾಟಕ ಬೇಕು. ಕಾಂಗ್ರೆಸ್ ಸರ್ಕಾರಗಳಿದ್ದಾಗ ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ಬಿಜೆಪಿ ಸರ್ಕಾರ ಮತ್ತೊಮ್ಮೆ ಬರಲು ಸಾಧ್ಯವಿಲ್ಲ. ನಾವೇ ಮುಂದಿನ ಬಜೆಟ್ ಮಾಡುತ್ತೇವೆ. ಯೋಜನೆ ಜಾರಿಗೆ ತರುತ್ತೇವೆ ಎಂದರು.

ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಕೇಂದ್ರ ಸಚಿವರು ಮಹದಾಯಿ ನೀರು ಹರಿದು ಬಂದೇ ಬಿಟ್ಟಿತು ಎನ್ನುವ ಹಾಗೆ ವಿಜಯೋತ್ಸವ ಆಚರಣೆ ಮಾಡಿದರು. ವಿಜಯೋತ್ಸವ ಆಚರಣೆ ಮಾಡುವುದಕ್ಕೆ ನಾಚಿಕೆ ಬರುವುದಿಲ್ಲವೆ ಎಂದು ಕಿಡಿ ಕಾರಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ, ಯೋಜನೆ ಜಾರಿ ಮಾಡುತ್ತೆವೆಂದು ಇದೇ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಪ್ರಧಾನಿ ಮೋದಿ ಅವರು ಗದಗ್ ನಲ್ಲಿ ನಮ್ಮ ಸರ್ಕಾರ ಬಂದರೆ ತಕ್ಷಣ ಗೋವಾ, ಕರ್ನಾಟಕ ಮುಖ್ಯಮಂತ್ರಿಗಳನ್ನು ಕರೆದು ಸಮಸ್ಯೆ ಇತ್ಯರ್ಥ ಮಾಡುತ್ತೆವೆ ಎಂದಿದ್ದರು. ಈಗ ಮತ್ತೊಮ್ಮೆ ಚುನಾವಣೆ ಬಂದಾಗ ಇವರಿಗೆ ಮಹದಾಯಿ ನೆನಪಗಾತ್ತದೆ. ಜನ ನಿಮ್ಮ ಸುಳ್ಳಿನಿಂದ ಬೇಸತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಸಮಾವೇಶದಲ್ಲಿ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್, ಮಾಜಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಅಂಜಲಿ ನಿಂಬಾಳ್ಕರ, ಅನಿಲಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ, ಬಸವರಾಜ್ ಗುರಿಕಾರ, ಐ.ಜಿ.ಸನದಿ, ಎ. ಎಂ. ಹಿಂಡಸಗೇರಿ, ಅಲ್ತಾಫ್ ಕಿತ್ತೂರ, ಎನ್.ಎಚ್.ಕೋನರಡ್ಡಿ, ರಾಜಶೇಖರ ಮೆಣಸಿನಕಾಯಿ, ವಿನೋದ್ ಅಸೂಟಿ, ಸದಾನಂದ ಡಂಗನವರ, ಪ್ರಸನ್ನಕುಮಾರ ಮಿರಜಕರ, ವೀರಣ್ಣ ಹಿರೇಹಾಳ, ವಾದಿರಾಜ ಕುಲಕರ್ಣಿ, ಬಸವರಾಜ್ ಮಲಕಾರಿ, ಸರೋಜಾ ಹೂಗಾರ, ನಿರಂಜನ ಹಿರೇಮಠ, ಕೀರ್ತಿ ಮೋರೆ, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.