ಮಹದಾಯಿ: ಕಾಂಗ್ರೆಸ್‍ನಿಂದ ಸಂಜೆ ಜಲ-ಜನಾಂದೋಲನ

ಹುಬ್ಬಳ್ಳಿ, ಜ2: ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗಾಗಿ ಶ್ರಮ, ಸಾಧನೆ ನನ್ನದು…… ನನ್ನದು ಎಂದು ಬಿಜೆಪಿ ಮತ್ತು ಕಾಂಗ್ರೆಸ್‍ಗಳೆರಡೂ ತೋಳೇರಿಸಿಕೊಂಡು ರಾಜಕೀಯ ಕದನಕ್ಕಿಳಿದಿರುವುದೀಗ ಜನತೆಯ ಗಮನ ಸೆಳೆಯುತ್ತಿದೆ.
ಮಹದಾಯಿ ಯೋಜನೆ ಜಾರಿ ವಿಷಯದಲ್ಲಿ ಇದುವರೆಗೂ ಕಾಂಗ್ರೆಸ್ ಪಕ್ಷದವರಿಂದ ಆಗದೇ ಹೋದ ಕಾರ್ಯವನ್ನು ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿವೆ ಎಂಬುದು ಬಿಜೆಪಿಯ ಸಮರ್ಥನೆ.
ಆದರೆ ಈ ಯೋಜನೆಯ ವಿಷಯದಲ್ಲಿ ಬಿಜೆಪಿ ಜನತೆಗೆ ಸುಳ್ಳು ಹೇಳುತ್ತ ಮೋಸ ಮಾಡುತ್ತ ಬಂದಿದೆ. ಯಾವುದೇ ಪ್ರಯತ್ನ ಮಾಡದೇ ದಾರಿ ತಪ್ಪಿಸುವ ಕಾರ್ಯ ಮಾಡುವುದಷ್ಟೇ ಮಾಡಿದೆ ಎಂದು ಕಾಂಗ್ರೆಸ್ ಪ್ರಹಾರ ಮಾಡುತ್ತಿದೆ.
ಬಿಜೆಪಿಯ ಪೊಳ್ಳುತನವನ್ನು ಬಯಲಿಗೆಳೆದು ನಿಜರೂಪ ತೋರುತ್ತೇವೆಂದು ಕಾಂಗ್ರೆಸ್ ನಗರದ ನೆಹರೂ ಮೈದಾನದಲ್ಲಿ ಇಂದು ಸಂಜೆ ಬೃಹತ್ `ಜಲ-ಜನಾಂದೋಲನ’ ಸಮಾವೇಶವನ್ನು ಹಮ್ಮಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಈ ಸಮಾವೇಶದಲ್ಲಿ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ವಿಧಾನ ಪರಿಷತ್ ವಿಪಕ್ಷನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಇನ್ನಿತರ ಹಿರಿಯ ನಾಯಕರ ದಂಡೇ ಪಾಲ್ಗೊಳ್ಳಲಿದೆ.
ಸಮಾವೇಶಕ್ಕಾಗಿ ಭರ್ಜರಿ ಸಿದ್ಧತೆಗಳನ್ನು ಮಾಡಲಾಗಿದ್ದು ನಗರದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್‍ಗಳು, ಬಾವುಟಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಒಂದೆಡೆ ಕಾಂಗ್ರೆಸ್‍ನಿಂದ ಆಗದ ಕೆಲಸ ನಾವು ಮಾಡಿದ್ದೇವೆ, ಎರಡೇ ತಿಂಗಳಲ್ಲಿ ಯೋಜನೆ ಕಾಮಗಾರಿ ಆರಂಭಿಸುತ್ತೇವೆ ಎಂದು ಕಾಂಗ್ರೆಸ್‍ನ ಸಮಾವೇಶದ ಮುನ್ನಾದಿನವೇ ಬಿಜೆಪಿ ನಗರದಲ್ಲಿ ವಿಜಯೋತ್ಸವ ಆಚರಿಸಿದೆ.
ಇನ್ನೊಂದೆಡೆ ಸರ್ವಸನ್ನದ್ಧ ರೀತಿಯಲ್ಲಿ ಬಿಜೆಪಿಯ ಬಣ್ಣ ಬಯಲಿಗೆಳೆಯುತ್ತೇವೆಂದು ಇಂದು ಆಯೋಜಿತ ಕಾಂಗ್ರೆಸ್‍ನ ಸಮಾವೇಶ.
ಒಟ್ಟಾರೆ ಉಭಯ ಪಕ್ಷಗಳ ಈ ರಾಜಕೀಯ ಸಮರ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಜನತೆ ಕುತೂಹಲದಿಂದ ನೋಡುತ್ತಿದ್ದಾರೆ.