
ಹುಬ್ಬಳ್ಳಿ,ಜು.15: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ಪ್ರಧಾನಮಂತ್ರಿ ಬಳಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋದಾಗ ಈ ಹೋರಾಟ ಕಾನೂನು ಹೋರಾಟ ಎಂದು ಹಾದಿ ತಪ್ಪಿಸುವ ಕೆಲಸ ಮಾಡಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಅನುಸರಿಸಿದ ಧೋರಣೆ ಕುರಿತು ಕಿರು ಹೊತ್ತಿಗೆ ಬಿಡುಗಡೆಗೊಳಿಸಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಡುವಳಿಕೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 14 ರಂದು ಕಳಸಾ-ಬಂಡೂರಿ ಯೋಜನೆ ಹೋರಾಟ 8 ವರ್ಷ ಪೂರೈಸಿ 9 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇದು ಹೋರಾಟಗಾರರಿಗೆ ನೋವಿನ ಸಂಗತಿಯಾಗಿದ್ದರೇ, ರಾಜಕೀಯ ನಾಯಕರಿಗೆ ರಾಜಕಾರಣ ಮಾಡಲು ಸಹಕಾರಿಯಾಗಿದೆ. ಈ ಮೂಲಕ ಜನರನ್ನು ರಾಜಕೀಯ ನಾಯಕರು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಳಸಾ-ಬಂಡೂರಿ ಯೋಜನೆ ಕಾನೂನು ಹೋರಾಟದಲ್ಲಿ ನ್ಯಾಯ ಒದಗಿಸಲು ಮಹತ್ವದ ಪಾತ್ರವಹಿಸಿರುವ ಮೋಹನ್ ಕಾತರಕಿ ಅವರು ಕೂಡಾ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಇದು ನಾಡಿಗೆ ಅವರು ಎಸಗಿರುವ ದ್ರೋಹ ಆಗಿದೆ. ಯೋಜನೆ ಅನುಷ್ಟಾನಕ್ಕಾಗಿ ನಿರಂತರವಾಗಿ ಹೋರಾಟ, ಪಾದಯಾತ್ರೆ, ರಕ್ತ ಪತ್ರ ಬರೆದರು ಕೂಡಾ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಆಲೆಕರ, ಗುರು ರಾಯನಗೌಡ್ರ ಇದ್ದರು.