
ವಿಜಯಪುರ:ಮೇ.4: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ ದಿನಾಂಕ : 10-05-2023 ರಂದು ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ ನಿಯೋಜಿತ ಮತಗಟ್ಟೆ ಸಿಬ್ಬಂದಿಗಳು ದಿನಾಂಕ : 09-05-2023 ರಂದು ಆಯಾ ಮತಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಮತಗಟ್ಟೆ ಅಧಿಕಾರಿಗಳು ವಾಸಿಸುವ ತಾಲೂಕಿನಿಂದ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಎಂ.ಜಿ.ವಿ.ಸಿ.ಕಾಲೇಜ್ ಮುದ್ದೇಬಿಹಾಳದಿಂದ, 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಎ.ಬಿ.ಸನ್ನಕ್ಕಿ ಪಿಯು ಕಾಲೇಜ್ ದೇವರಹಿಪ್ಪರಗಿಯಿಂದ, 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಬಸವೇಶ್ವರ ಸರಕಾರಿ ಪದವಿಪೂರ್ವ ಕಾಲೇಜ್ ಬಸವನಬಾಗೇವಾಡಿಯಿಂದ, 29-ಬಬಲೇಶ್ವರ ಮತಕ್ಷೇತ್ರದಲ್ಲಿ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್, ಬಬಲೇಶ್ವದಿಂದ, 30-ಬಿಜಾಪುರ ನಗರ ಹಾಗೂ 31-ನಾಗಠಾಣ ಮತಕ್ಷೇತ್ರದಲ್ಲಿ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ವಿಜಯಪುರದಿಂದ, 32-ಇಂಡಿ ಮತಕ್ಷೇತ್ರದಲ್ಲಿ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯ ಹಾಗೂ 33-ಸಿಂದಗಿ ಮತಕ್ಷೇತ್ರದಲ್ಲಿ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್ ಸಿಂದಗಿಯಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
ಮತಗಟ್ಟೆ ಸಿಬ್ಬಂದಿಗಳು ದಿನಾಂಕ : 09-05-2023 ರಂದು ಬೆಳಿಗ್ಗೆ 6 ಗಂಟೆಯಿಂದ 7-30 ಗಂಟೆಯೊಳಗೆ ನಿಗದಿಪಡಿಸಿದ ಸ್ಥಳಕ್ಕೆ ಮುಂಚಿತವಾಗಿ ಹಾಜರಿರಬೇಕು. ನೀವು ತೆರಳಬೇಕಾಗಿರುವ ತಾಲೂಕಿನ ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಪ್ರತಿಯೊಂದು ಬಸ್ಸಿಗೆ ಫಲಕವನ್ನು ಸಹ ಅಳವಡಿಸಲಾಗಿದೆ. ಮಸ್ಟರಿಂಗ್ ಕೇಂದ್ರಗಳಿಗೆ ಹಾಜರಾಗಲು ಯಾವುದೇ ಅನಾನೂಕೂಲವಾಗದಂತೆ ನೋಡಿಕೊಳ್ಳಲು ಪ್ರತಿಯೊಂದು ತಾಲೂಕಿನಿಂದ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದ್ದು, ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ನಿಗದಿತ ಸಮಯಕ್ಕೆ ಮಸ್ಟರಿಂಗ್ ಕೇಂದ್ರಕ್ಕೆ ಹಾಜರಾಗುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.