
ನ್ಯೂಯಾರ್ಕ್, ಆ.೧೩- ಸದ್ಯ ಜಾಗತಿಕ ತಂತ್ರಜ್ಞಾನದ ಯುಗದ ಪ್ರಮುಖ ತಾರೆಗಳೆಂದೇ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಹಾಗೂ ಮಾರ್ಕ್ ಝುಕರ್‌ಬರ್ಗ್ ನಡುವೆ ನಡೆಯಲಿರುವ ಪಂಜರ ಕಾಳಗ ಇದೀಗ ಎಲ್ಲರ ಗಮನ ಸೆಳೆದಿದೆ. ಈ ನಡುವೆ ಕಾಳಗವು ಇಟಲಿಯಲ್ಲಿ ನಡೆಯಲಿದೆ ಎಂದು ಟೆಸ್ಲಾ, ಎಕ್ಸ್ (ಟ್ವಿಟರ್) ಮುಖ್ಯಸ್ಥ ಎಲಾನ್ ಮಸ್ಕ್ ಘೋಷಿಸಿದ್ದಾರೆ.
ಜಾಗತಿಕ ಟೆಕ್ ಸಂಸ್ಥೆಗಳ ಮುಖ್ಯಸ್ಥರ ನಡುವಿನ ಚಾರಿಟಿ ಆಧಾರಿತ ಈ ಪಂಜರ ಕಾಳಗದ ಬಗ್ಗೆ ಈತನಕ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ ಮಸ್ಕ್ ಮಾತ್ರ ಕಾಳಗವು ಇಟಲಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ನಾನು ಈಗಾಗಲೇ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಬಳಿ ಮಾತನಾಡಿದ್ದೇನೆ. ಅವರು ಕಾಳಗ ನಡೆಯುವ ಸ್ಥಳದ ಬಗ್ಗೆ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಸ್ಕ್ ತಿಳಿಸಿದ್ದಾರೆ. ಅತ್ತ ಮಸ್ಕ್ ಹೇಳಿಕೆಗೆ ತನ್ನ ಸಾಮಾಜಿಕ ಜಾಲತಾಣ ಥ್ರೆಡ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಝುಕರ್‌ಬರ್ಗ್, ಶರ್ಟ್ ಧರಿಸದ ತನ್ನ ಫೊಟೋವೊಂದನ್ನು ಪೋಸ್ಟ್ ಮಾಡಿ, ಎದುರಾಳಿಯನ್ನು ನೆಲಕ್ಕೆ ಅಪ್ಪಳಿಸುವ ಫೊಟೋವನ್ನು ಅಪ್ಲೋಡ್ ಮಾಡಿದ್ದಾರೆ. ನಾನು ಈ ಕ್ರೀಡೆಯನ್ನು ಪ್ರೀತಿಸುತ್ತೇನೆ ಮತ್ತು ಎಲೋನ್ ನನಗೆ ಸವಾಲು ಹಾಕಿದ ದಿನದಿಂದಲೂ ನಾನು ಹೋರಾಡಲು ಸಿದ್ಧನಾಗಿದ್ದೇನೆ. ಅವರು ಎಂದಾದರೂ ನಿಜವಾದ ದಿನಾಂಕವನ್ನು ಒಪ್ಪಿಕೊಂಡರೆ, ನೀವು ಅದನ್ನು ನನ್ನಿಂದ ಕೇಳುತ್ತೀರಿ. ಅಲ್ಲಿಯವರೆಗೆ, ಅವರು ಹೇಳುವ ಯಾವುದನ್ನಾದರೂ ಒಪ್ಪಿಲ್ಲ ಎಂದು ಭಾವಿಸಿ ಎಂದು ಝುಕರ್‌ಬರ್ಗ್ ತಿಳಿಸಿದ್ದಾರೆ. ಅಲ್ಲದೆ ಇಟಲಿಯ ಸಾಂಸ್ಕೃತಿಕ ಸಚಿವ ಗೆನ್ನಾರೊ ಸಾಂಗಿಯುಲಿಯಾನೊ ಅವರು ಮಸ್ಕ್ ಜೊತೆಗೆ ಮಾತುಕತೆ ನಡೆಸಿದ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಇತಿಹಾಸವನ್ನು ಪ್ರಚೋದಿಸುವ ಮಹಾನ್ ಚಾರಿಟಿ ಕಾರ್ಯಕ್ರಮವನ್ನು ಹೇಗೆ ಆಯೋಜಿಸುವುದು ಎಂಬುದರ ಕುರಿತು ಮಸ್ಕ್‌ನೊಂದಿಗೆ ಮಾತನಾಡಿರುವುದನ್ನು ದೃಢಪಡಿಸಿದರು ಆದರೆ ಯಾವುದೇ ಪಂದ್ಯವನ್ನು ರೋಮ್‌ನಲ್ಲಿ ನಡೆಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.