ಮಸ್ಕಿ ಠಾಣೆ ಪಿಎಸ್‌ಐ ಬಂಧಿಸಿ ಸೇವೆಯಿಂದ ಅಮಾನತ್ತುಗೊಳಿಸಲಿ

ರಾಯಚೂರು,ಸೆ .೨೫- ಮಸ್ಕಿ ಠಾಣೆ ವ್ಯಾಪ್ತಿಯಲ್ಲಿ ಇದೇ ತಿಂಗಳು ೨೦ ತಾರೀಖಿನಂದು ನಿರುಪಾದಿ ನಾಯಕ್ ಎನ್ನುವ ಬಡ ರೈತನ ಮೇಲೆ ಮನಸೋ ಇಚ್ಚೆ ದಾಳಿ ಮಾಡಿ ಹಲ್ಲೆ ಮಾಡಿದ್ದು, ಕೂಡಲೇ ಆತನನ್ನು ಅಮಾನತ್ತು ಮಾಡಿ ಬಂಧಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘವೀರ ನಾಯಕ್ ಅವರು ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಿರುಪಾದಿ ಎಂಬ ಬಡ ರೈತ ತನ್ನ ಹೊಲದಲ್ಲಿಯೇ ಮಣ್ಣನ್ನು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬಂದು ಮಣ್ಣನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿರುವೆ ಎಂದು ಮನಸೋ ಇಚ್ಚೆ ಹಲ್ಲೆ ಮಾಡಿದ್ದು. ಗಂಭೀರವಾಗಿ ಹಲ್ಲೆಗೊಳಗಾದ ನಿರುಪಾದಿಯನ್ನು ರಾಯಚೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಮಣಿಕಂಠ ಪಿ.ಎಸ್.ಐ ಅವರು ಹಿಂದಿನ ಪೊಲೀಸ್ ಠಾಣೆಯಲ್ಲಿಯೂ ಇದೇ ರೀತಿಯ ಕೃತ್ಯವನ್ನು ಎಸಗಿದ್ದು ಕೂಡಲೇ ಆತನ ವಿರುದ್ಧ ಗೂಂಡಾಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ಶಾಶ್ವತವಾಗಿ ಪೊಲೀಸ್ ಇಲಾಖೆಯಿಂದ ಹೊರ ಹಾಕಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಮಣಿಕಂಠನನ್ನು ಬಂಧಿಸದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ್ ,ರಮೇಶ್ ನಾಯಕ್, ರಾಮು , ಕೃಷ್ಣ ನಾಯಕ್,ಅನ್ವರ್ ಈರಣ್ಣ ನಾಯಕ್ ಉಪಸ್ಥಿತರಿದ್ದರು.