ಮಸ್ಕಿ ಚುನಾವಣೆ : ಅಕ್ರಮ ಮದ್ಯ, ಸೀರೆ, ಹಣ ಹಂಚಿಕೆ, ರೌಡಿ ಪ್ರವೇಶ – ಹದ್ದಿನ ಕಣ್ಣು

ಇಂದು ಕರ್ನಾಟಕ – ತೆಲಂಗಾಣ ಪೊಲೀಸರ ಮಹತ್ವದ ಸಭೆ : ಗಡಿಯಲ್ಲಿ ನಾಕಾಬಂಧಿ
ರಾಯಚೂರು.ಮಾ.೨೫- ಹೈವೋಲ್ಟೇಜ್ ಮತ್ತು ಭಾರೀ ಹಣದ ವ್ಯವಹಾರದ ಕೇಂದ್ರವಾಗುವ ಮಸ್ಕಿ ಉಪ ಚುನಾವಣೆಯಲ್ಲಿ ಅಕ್ರಮ ತಡೆಯಲು ಜಿಲ್ಲಾಡಳಿತ ಜಿಲ್ಲೆಯ ಪೊಲೀಸರೊಂದಿಗೆ ಗಡಿ ತೆಲಂಗಾಣ ಪೊಲೀಸರ ಸಹಕಾರದ ಮಹತ್ವದ ಸಭೆ ಇಂದು ನಡೆಸಲಾಯಿತು.
ಮಸ್ಕಿ ಉಪ ಚುನಾವಣೆ ಅನೇಕ ಅವಾಂತರ ಮತ್ತು ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಿಗೆ ದಾರಿಯಾಗುವ ಮುನ್ನೆಚ್ಚರಿಕಾ ಹಿನ್ನೆಲೆಯಲ್ಲಿ ಮಸ್ಕಿಯ ಜಿಲ್ಲೆಯ ಗಡಿ ಭಾಗ ಸೇರಿದಂತೆ ತೆಲಂಗಾಣ ಗಡಿ ಭಾಗದಲ್ಲೂ ಬಂದೋಬಸ್ತ್ ಹಾಗೂ ನೀತಿ ಸಂಹಿತೆ ನಿರ್ವಹಣೆಗೆ ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಮತ್ತು ತೆಲಂಗಾಣ ಪೊಲೀಸರ ಮಹತ್ವದ ಸಭೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಿರ್ವಹಿಸಲಾಯಿತು.
ಈ ಸಭೆಯಲ್ಲಿ ಎಸ್ಪಿ ಪ್ರಕಾಶ ನಿಕಂ ಅವರು ಹಾಗೂ ಅಪರ ಜಿಲ್ಲಾಧಿಕಾರಿ ದುರ್ಗೇಶ ಅವರು ಉಭಯ ರಾಜ್ಯಗಳ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಜಾರಿ ಮಾಡಿದರು. ಜಿಲ್ಲಾ ಗಡಿಯೊಳಗೆ ಮತ್ತು ಗಡಿ ಹೊರ ಭಾಗದಲ್ಲಿ ಅಕ್ರಮಗಳಿಗೆ ಅನುಕೂಲವಾಗುವಂತಹ ಯಾವುದೇ ಚಟುವಟಿಕೆಗಳು ನಡೆಯದಂತೆ ತಡೆಯುವ ಸೂಚನೆ ನೀಡಲಾಯಿತು. ವಿಶೇಷವಾಗಿ ಮದ್ಯ ಮಾರಾಟದ ಮೇಲೆ ನಿಗಾವಹಿಸಲು ನಿರ್ದೇಶಿಸಲಾಗಿದೆ. ಸೀರೆ ವಿತರಣೆ, ರೌಡಿಶೀಟರ್ ಪ್ರವೇಶ, ಸಿಹೆಚ್ ಪೌಡರ್, ನಕಲಿ ಮತದಾರರ ಪ್ರವೇಶವನ್ನು ತಡೆಯಲು ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆಗೆ ಆದೇಶಿಸಲಾಯಿತು.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷವೊಡ್ಡಲು ಉಡುಗೊರೆ, ಮದ್ಯ, ಹಣ ಸಾಗಾಣಿಕೆ ಸೇರಿದಂತೆ ಇತರೆ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾವಹಿಸಲು ಪೊಲೀಸರಿಗೆ ಸೂಚಿಸಲಾಯಿತು. ಮಸ್ಕಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಿಸಿ, ತಪಾಸಣೆ ನಿರ್ವಹಿಸುವಂತೆ ಆದೇಶಿಸಲಾಯಿತು. ಒಟ್ಟಾರೆಯಾಗಿ ಏ.೧೭ ರಂದು ನಡೆಯುವ ಮಸ್ಕಿ ವಿಧಾನಸಭಾ ಚುನಾವಣೆಗೆ ಯಾವುದೇ ತೊಂದರೆಯಾಗದಂತೆ ಕರ್ನಾಟಕ ಮತ್ತು ತೆಲಂಗಾಣ ಪೊಲೀಸರು ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಲಾಯಿತು.
ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ಭಾರೀ ಪ್ರಮಾಣದ ಹಣದ ವ್ಯವಹಾರ ನಡೆಯುವ ಮಾಹಿತಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಈ ಚುನಾವಣೆ ಗೆಲುವು ಅತ್ಯಂತ ಪ್ರತಿಷ್ಠೆಯಾಗಿದ್ದರಿಂದ ಹೆಚ್ಚಿನ ಹಣ ಈ ಚುನಾವಣೆಯಲ್ಲಿ ಕೈ ಬದಲಾಗುವ ಸಾಧ್ಯತೆಗಳ ಬಗ್ಗೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದೆ. ಈಗಾಗಲೇ ಉಡುಗೊರೆಗಳನ್ನು ನೀಡುವ ಪರಂಪರೆಗೆ ಕಡಿವಾಣ ಹಾಕಲು ವೀಕ್ಷಕರನ್ನು ನೇಮಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯೂ ಸಹ ಈ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿದೆ. ದಿನದ ೨೪ ಗಂಟೆ ಕಾರ್ಯ ನಿರ್ವಹಿಸುವ ನಿಯಂತ್ರಣಾ ಕೊಠಡಿಯನ್ನು ಆರಂಭಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಪಕ್ಷ ನಗದು ವಿತರಣೆ ಅಥವಾ ಯಾವುದೇ ರೀತಿಯ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಹಂಚಿದರೇ, ಇತರೆ ಯಾವುದೇ ಆಮಿಷಗಳನ್ನು ತೋರಿಸುವ ದೂರುಗಳಿದ್ದರೇ, ಶುಲ್ಕ ರಹಿತ ದೂರವಾಣಿ ಸಂಖ್ಯೆಗಳಾದ ೧೮೦೦-೪೨೫-೨೧೧೫ ದೂರವಾಣಿ ಸಂಖ್ಯೆಗಳಾದ ೦೮೦೨೨೬೮೧೧೨೬, ೦೮೦೨೨೮೬೨೩೨೪ ಹಾಗೂ ಮೊಬೈಲ್ ದೂರವಾಣಿ ಸಂಖ್ಯೆಗಳಾದ ೮೨೭೭೪೨೨೮೨೫, ೮೨೭೭೪೧೩೬೧೪ ಸಂಖ್ಯೆಗಳಿಗೆ ದೂರವಾಣಿ ಕರೆ ಮಾಡುವಂತೆ ಕೋರಲಾಗಿದೆ.
ತೆಲಂಗಾಣ ಭಾಗದಿಂದ ಸಿಹೆಚ್ ಪೌಡರ್ ವ್ಯಾಪಕವಾಗಿ ಜಿಲ್ಲೆಯ ಗಡಿಯೊಳಗೆ ಸಾಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಈ ಬಗ್ಗೆಯೂ ನಿಗಾವಹಿಸಲಾಗುತ್ತದೆ. ಚುನಾವಣೆಯೆಂದರೇ ಉಡುಗೊರೆ ನೀಡುವುದು ಸಾಮಾನ್ಯ. ಮತದಾರರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಮತದಾರರನ್ನು ಆಕರ್ಷಿಸಲು ಸೀರೆ ವಿತರಣೆ ನಡೆಸಲಾಗುತ್ತದೆ. ಈ ಚುನಾವಣೆಯಲ್ಲಿ ಇಂತಹ ಯಾವ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಡೆಯಲು ಕರ್ನಾಟಕ ಮತ್ತು ತೆಲಂಗಾಣ ಗಡಿಯಲ್ಲಿ ಜಂಟಿ ಪೊಲೀಸ್ ಬಂದೋಬಸ್ತ್ ಈ ಸೀರೆ ವಿತರಣೆ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದು ಈಗ ಕುತೂಹಲ ಮೂಡಿಸಿದೆ.
ಪ್ರತಿ ಉಪ ಚುನಾವಣೆಯಲ್ಲಿ ಆಡಳಿತರೂಢ ಪಕ್ಷ ಭಾರೀ ಪ್ರಮಾಣದ ಹಣ ಹಂಚುವಿಕೆಗೆ ಮುಂದಾಗುತ್ತದೆ ಎನ್ನುವ ಸಂಶಯ ಮತ್ತು ವಿರೋಧ ಪಕ್ಷಗಳ ದೂರಿನ ಹಿನ್ನೆಲೆಯಲ್ಲಿ ಹಣ ಸಾಗಾಣಿಕೆ ಮೇಲೆ ಭಾರೀ ನಿಗಾವಹಿಸಲಾಗಿದೆ. ಒಟ್ಟಾರೆಯಾಗಿ ಮಸ್ಕಿ ವಿಧಾನಸಭಾ ಚುನಾವಣೆ ಈಗ ಎಲ್ಲಿಲ್ಲದ ಗಮನ ಆಕರ್ಷಿಸಿದೆ. ನಿನ್ನೆ ಬಿಜೆಪಿ ಪಕ್ಷದಿಂದ ಪ್ರತಾಪಗೌಡ ಪಾಟೀಲ್ ಅವರು ನಾಮಪತ್ರ ಸಲ್ಲಿಸಿದರೇ, ಕಾಂಗ್ರೆಸ್ ಪಕ್ಷದಿಂದ ಬಸವನಗೌಡ ತುರ್ವಿಹಾಳ ಅವರು ನಾಮಪತ್ರ ಸಲ್ಲಿಸುವ ಮೂಲಕ ಮಸ್ಕಿ ಚುನಾವಣೆಗೆ ಚುರುಕು ನೀಡಿದಂತಾಗಿದೆ. ಮಾ.೩೦ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಏ.೧ ರಿಂದ ೧೭ ದಿನಗಳ ಅವಧಿಯಲ್ಲಿ ಜಿದ್ದಾಜಿದ್ದಿಯ ಪೈಪೋಟಿ ನಡೆಯಲಿದ್ದು, ಈ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್ ನಾಲ್ಕನೇ ಬಾರಿಗೆ ಗೆಲ್ಲುವರೇ ಅಥವಾ ಪ್ರಥಮ ಗೆಲುವಿನ ದಾಖಲೆಯನ್ನು ಬಸವನಗೌಡ ತುರ್ವಿಹಾಳ ಅವರು ಬರೆಯುವರೇ ಎಂದು ಕಾದು ನೋಡಬೇಕಾಗಿದೆ.