ಮಸ್ಕಿ : ಕಾಂಗ್ರೆಸ್ ರೋಡ್ ಶೋ, ಬಿಜೆಪಿ 50 ಕೋಟಿ ಖರ್ಚು – ಆರೋಪ

ರಾಯಚೂರು.ಏ.05- ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ಬಿರುಸು ಈಗ ತೀವ್ರಗೊಂಡಿದೆ. ಒಂದೆಡೆ ಕಾಂಗ್ರೆಸ್, ಮತ್ತೊಂದೆಡೆ ಬಿಜೆಪಿ ತಂಡಗಳು ಮತದಾನದ ಗಮನ ಸೆಳೆಯಲು ಮತ್ತು ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಭಾರೀ ರೋಡ್ ಶೋ ನಿರ್ವಹಿಸುತ್ತಿದೆ.
ಇಂದು ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ಮಸ್ಕಿ ವಿಧಾನಸಭಾ ಕ್ಷೇತ್ರದ ಉಮಲೂಟಿ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿಯಾದ ಬಸವನಗೌಡ ತುರ್ವಿಹಾಳ ಅವರ ಪರವಾಗಿ ಪ್ರಚಾರ ನಿರ್ವಹಿಸಿದರು. ಲಾರಿಯೊಂದರಲ್ಲಿ ಎಲ್ಲಾ ನಾಯಕರು ನಿಂತು ಈ ರೋಡ್ ಶೋ ನಡೆಸಲಾಯಿತು. ಭಾರೀ ಧ್ವಜಾಗಳು ಮತ್ತು ಭಾರೀ ಜನಸ್ತೋಮದ ಮಧ್ಯೆ ಕಾಂಗ್ರೆಸ್ ಪಕ್ಷದ ಅದ್ಧೂರಿ ಪ್ರಚಾರ ನಿರ್ವಹಿಸಲಾಯಿತು.
ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಮುಖ ನಾಯಕರು ಮಸ್ಕಿ ಕ್ಷೇತ್ರದಲ್ಲಿ ನಾಳೆ ಸಂಜೆವರೆಗೂ ವಿವಿಧೆಡೆ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳನ್ನು ನಿರ್ವಹಿಸಲಿದ್ದಾರೆ. ಈ ಎರಡು ದಿನಗಳಲ್ಲಿ ವ್ಯಾಪಕವಾಗಿ ಮತದಾರರನ್ನು ಮುಟ್ಟುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಒಂದೆಡೆ ಮೈ ಚೂರ್ ಎನ್ನುವ ಬಿಸಿಲು, ಮತ್ತೊಂದೆಡೆ ಭಾರೀ ಜನಸ್ತೋಮದ ಮಧ್ಯೆ ನಿಧಾನವಾಗಿ ಸಾಗುವ ವಾಹನಗಳಲ್ಲಿ ತಮ್ಮ ಪ್ರಚಾರ ಕಾರ್ಯ ನಿರ್ವಹಿಸಿದರು. ಬಸವನಗೌಡ ತುರ್ವಿಹಾಳ ಅವರಿಗೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಈ ಚುನಾವಣೆ ಗೆಲ್ಲಲು 50 ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದ ಭ್ರಷ್ಟಾಚಾರದ ಹಣವನ್ನು ಇಲ್ಲಿ ಸುರಿಯುತ್ತಿದೆ. ಜನರು ನೀವು ಎಚ್ಚರಿಕೆಯಿಂದ ಮತ ಚಲಾಯಿಸಲು ಮನವಿ ಮಾಡಿದ ಅವರು, ಕಳೆದ ಸಲ ಪ್ರತಾಪಗೌಡ ಪಾಟೀಲ್ ಅವರನ್ನು ಗೆಲ್ಲಿಸಿದ ನಿಮಗೆ ಪ್ರತಾಪಗೌಡ ಪಾಟೀಲ್ ತಮ್ಮನ್ನೇ ಮಾರಿಕೊಂಡು ಅಪಮಾನ ಮಾಡಿದರು. ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. 7 ಕೆಜಿ ಅಕ್ಕಿ ವಿತರಿಸುತ್ತಿತ್ತು. ಅದನ್ನು 5 ಕೆಜಿಗೆ ಇಳಿಸಲಾಗಿದೆ. ಕ್ಷೀರಭಾಗ್ಯ, ಪಶುಭಾಗ್ಯ ಸೇರಿದಂತೆ ಇತರೆ ಯೋಜನೆಗಳು ಈಗ ಬಡವರ ಪಾಲಿಗೆ ಇಲ್ಲದಂತಾಗಿದೆ.
2023 ಕ್ಕೆ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ಧ. ಅಧಿಕಾರಕ್ಕೆ ಬಂದ ಮೊದಲನೇ ಕಾರ್ಯಕ್ರಮ 10 ಕೆಜಿ ಅಕ್ಕಿ ಕೊಡುವುದಾಗಿ ಅವರು ಭರವಸೆ ನೀಡಿದರು. ಈ ಪ್ರಚಾರ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ ಅವರು ಮಾಧ್ಯಮಗಳಿಂದ ದೂರ ಉಳಿದಿದ್ದರು. ಅವರಲ್ಲಿ ಲವಲವಿಕೆ ಕೊಂಚ ಕಡಿಮೆಯಾಗಿರುವುದು ಕಂಡು ಬಂದಿತು. ಈ ಸಂದರ್ಭದಲ್ಲಿ ಅಭ್ಯರ್ಥಿ ಬಸವನಗೌಡ ತುರ್ವಿಹಾಳ, ಮಾಜಿ ಶಾಸನ ಹಂಪನಗೌಡ ಬಾದರ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.