ಮಸ್ಕಿ ಉಪ ಚುನಾವಣೆ : ಶಿವನಗೌಡ ಅಂತರ – ತೀವ್ರ ಚರ್ಚೆ

ರಾಯಚೂರು.ಏ.೧೦- ಚುನಾವಣೆ ಸಂದರ್ಭದಲ್ಲಿ ಸೋಲು, ಗೆಲುವಿನ ಬಗ್ಗೆ ನಿಖರವಾಗಿ ಅಂದಾಜು ಮಾಡುವ ಮತ್ತು ಚುನಾವಣಾ ನಿರ್ವಹಣೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವ ತಾಂತ್ರಿಕತೆಯ ಮಾಹಿತಿ ಹೊಂದಿದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು, ಮಸ್ಕಿ ವಿಧಾನಸಭಾ ಚುನಾವಣೆಯಿಂದ ದೂರ ಉಳಿದಿರುವುದು ಈಗ ಭಾರೀ ಚರ್ಚೆಯ ವಿಷಯವಾಗಿದೆ.
ಚುನಾವಣೆ ಪ್ರಕ್ರಿಯೆ ಆರಂಭಗೊಂಡ ನಂತರ ಮುಖ್ಯಮಂತ್ರಿಗಳು ಸೇರಿದಂತೆ ಘಟಾನುಘಟಿ ನಾಯಕರು ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ನಿರಂತರ ಭೇಟಿ ನೀಡುತ್ತಿದ್ದರೂ, ಕೆ.ಶಿವನಗೌಡ ನಾಯಕ ಮಾತ್ರ ಇತ್ತ ಸುಳಿಯದಿರುವುದು ಏಕೆ ಎನ್ನುವುದು ಈಗ ಗಂಭೀರ ಪ್ರಶ್ನೆಯಾಗಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡ ಅವರು, ಚುನಾವಣಾ ನಿರ್ವಹಣೆಯ ತಂತ್ರಗಳ ಒಳ ಸುಳುವು ಬಲ್ಲ ಶಿವನಗೌಡ ನಾಯಕ ಅವರು ಮಸ್ಕಿ ಚುನಾವಣೆಯಿಂದ ಮಾತ್ರ ದೂರ ಉಳಿಯಲು ಕಾರಣವೇನು?.
ಜಿಲ್ಲೆಯಾದ್ಯಂತ ತಮ್ಮದೇಯಾದ ಬೆಂಬಲಿಗರನ್ನು ಹೊಂದಿದ ಕೆ.ಶಿವನಗೌಡ ನಾಯಕ ಅವರು, ಮಸ್ಕಿ ಕ್ಷೇತ್ರದಲ್ಲೂ ತಮ್ಮ ಬೆಂಬಲಗರನ್ನು ಹೊಂದಿದ ನಾಯಕರಾಗಿದ್ದಾರೆ. ಮಾಜಿ ಸಂಸದ ವೆಂಕಟೇಶ ನಾಯಕ ಅವರ ನಿಧನದ ನಂತರ ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣಾ ಸಂದರ್ಭದಲ್ಲಿ ಅಂದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತರೂಢ ಪಕ್ಷವಾಗಿತ್ತು. ರಾಜಶೇಖರ ನಾಯಕ ಅವರು, ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇಡೀ ಸರ್ಕಾರ ಕೋಟ್ಯಾಂತರ ರೂ. ಹಣ ಬಳಸಿ, ಕೆ.ಶಿವನಗೌಡ ಅವರನ್ನು ಸೋಲಿಸಲು ಏನೆಲ್ಲಾ ಕಾರ್ಯತಂತ್ರ ರೂಪಿಸಿದ್ದರೂ ಸುಮಾರು ೨೪ ಸಾವಿರ ಅಂತರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ ಶಿವನಗೌಡ ಅವರು ಚುನಾವಣೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಉಪ ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯುವುದು ಹೇಗೆ ಎನ್ನುವ ಸೂಕ್ಷ್ಮತೆ ಬಲ್ಲ ನಾಯಕರು. ಪ್ರಸ್ತುತ ಅವರು ಶಾಸಕರು.ಇವರು ಮಸ್ಕಿ ಚುನಾವಣೆಯಲ್ಲಿ ಇನ್ನೂವರೆಗೂ ತೊಡಗಿಸಿಕೊಳ್ಳದಿರಲು ಕಾರಣವೇನು?.
ಕಾಂಗ್ರೆಸ್ ಮತ್ತು ಜಾದಳ ಮಧ್ಯೆ ಅತ್ಯಂತ ಪ್ರತಿಷ್ಠಿತ ಮತ್ತು ಜಿದ್ದಾಜಿದ್ದಿ ಪೈಪೋಟಿ ಕಣವಾಗಿದ್ದ ಮಸ್ಕಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರು ಬೀಡು ಬಿಟ್ಟು ಚುನಾವಣಾ ಚಟುವಟಿಕೆಯನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಜಿಲ್ಲೆಯ ಶಾಸಕರಾಗಿರುವ ಶಿವನಗೌಡ ನಾಯಕ ಈ ಚುನಾವಣೆಯಿಂದ ದೂರ ಉಳಿಯುವುದರಿಂದಿನ ಮರ್ಮವೇನು?. ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿ ಕೆ.ಶಿವನಗೌಡ ನಾಯಕ ಅವರ ಗೈರು ರಾಜಕೀಯವಾಗಿ ಗಮನ ಸೆಳೆದಿದೆ.
ನಾಮಪತ್ರ ಸಲ್ಲಿಸುವಿಕೆಯಿಂದ ಹಿಡಿದು ಇಂದಿನವರೆಗೂ ಅವರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಯಾವ ವಿಶೇಷ ಕಾರಣವಿದೆ ಎನ್ನುವುದು ತಿಳಿಯದಾಗಿದೆ. ಈ ಕುರಿತು ಸ್ವತಃ ಅವರನ್ನು ಸಂಪರ್ಕಿಸಿದಾಗ ನಾನು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳದಿರಲು ನನ್ನ ಕೈ ಮುರಿದಿರುವುದೇ ಕಾರಣವೆಂದು ಹೇಳಿದರು. ಪ್ರತಾಪಗೌಡ ಪಾಟೀಲ್ ಅವರು ನಮ್ಮ ಪಕ್ಷದ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಅವರು ಗೆಲ್ಲುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಅವರು, ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಪಕ್ಷ ಅವರ ಬೆನ್ನಿಗೆ ನಿಂತು ಪ್ರಚಾರ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಉಪ ಚುನಾವಣೆಯಲ್ಲಿ ಅವರ ಗೆಲುವಿಗೆ ವಾತಾವರಣ ಕ್ಷೇತ್ರದಲ್ಲಿ ಇದೆಂದು ಹೇಳಿದರು.