ಮಸ್ಕಿ ಉಪ ಚುನಾವಣೆ : ವಿಜಯೇಂದ್ರ ಪ್ರವೇಶ – ಬಿರುಸುಗೊಂಡ ಕಾಂಗ್ರೆಸ್, ಬಿಜೆಪಿ ಪೈಪೋಟಿ

 • ಸಂತೆಕಲ್ಲೂರು : ಭಾರೀ ಸ್ವಾಗತ – ಬೈಕ್ ರ್‍ಯಾಲಿ, ಕೆಲ ಪ್ರಮುಖ ಮುಖಂಡರ ಭೇಟಿ – ಚರ್ಚೆ
  ರಾಯಚೂರು.ಏ.೦೨- ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಕಾಂಗ್ರೆಸ್ ನೀಡಿದ ಪ್ರಚಾರದ ವೇಗಕ್ಕೆ ಪೈಪೋಟಿ ನೀಡಲು ಇಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಬೈಕ್ ಱ್ಯಾಲಿ ಆಯೋಜಿಸಲಾಗಿದೆ.
  ಮುಂಜಾನೆ ಸಂತೆ ಕಲ್ಲೂರಿಗೆ ಆಗಮಿಸಿದ ವಿಜಯೇಂದ್ರ ಅವರಿಗೆ ಬಿಜೆಪಿ ಬೆಂಬಲಿಗರಿಂದ ಭಾರೀ ಸ್ವಾಗತ ವ್ಯಕ್ತಗೊಂಡಿತು. ಮತ್ತೊಂದೆಡೆ ಮಠದಿಂದ ಬೈಕ್ ಱ್ಯಾಲಿ ನಿರ್ವಹಿಸಲಾಯಿತು. ಕಳೆದ ತಿಂಗಳು ೨೯ ರಂದು ಮಸ್ಕಿ ಕ್ಷೇತ್ರಕ್ಕೆ ವಿಜಯೇಂದ್ರ ಅವರು ಆಗಮಿಸಬೇಕಾಗಿತ್ತು. ಅವರ ಗೈರು ಅನೇಕ ಅನುಮಾನಗಳಿಗೆಡೆ ಮಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೈಕ್ ಱ್ಯಾಲಿಗೆ ಚಾಲನೆ ನೀಡಲು ಆಗಮಿಸಿದ ವಿಜಯೇಂದ್ರ ಅವರು ಮಸ್ಕಿ ಕ್ಷೇತ್ರದ ಬಿಜೆಪಿ ಪ್ರಚಾರಕ್ಕೆ ತೀವ್ರ ಚಾಲನೆ ನೀಡಿದ್ದಾರೆ.
  ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಮಸ್ಕಿ ಕ್ಷೇತ್ರಕ್ಕೆ ವಿಜಯೇಂದ್ರ ಅವರು ಉಸ್ತುವಾರಿ ಇರಲೇಬೇಕೆಂದು ಆಗ್ರಹ ಪೂರಕ ಅವರನ್ನು ಉಸ್ತುವಾರಿ ಪಟ್ಟಿಯಲ್ಲಿ ಸೇರಿಸಿದ್ದರು. ಯಡಿಯೂರಪ್ಪ ಅವರ ಜೊತೆ ಪ್ರಚಾರಕ್ಕೆ ಆಗಮಿಸಿದ ನಂತರ ಮಾ.೨೯ ರಂದು ಅವರು ಕ್ಷೇತ್ರಕ್ಕೆ ಆಗಮಿಸಬೇಕಾಗಿತ್ತು. ಆದರೆ, ಅವರ ಗೈರು ಹಿನ್ನೆಲೆಯಲ್ಲಿ ಬಿಜೆಪಿ ಕೊಂಚ ಗೊಂದಲಕ್ಕೆಡೆಯಾಗಿತ್ತು. ಇಂದು ವಿಜಯೇಂದ್ರ ಅವರ ಆಗಮನ ಪ್ರತಾಪಗೌಡ ಪಾಟೀಲ್ ಅವರಿಗೆ ಸಮಾಧಾನಗೊಳ್ಳುವಂತೆ ಮಾಡಿದೆ.
  ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಸೇರಿದಂತೆ ಇತರೆ ಮುಖಂಡರು ಆಗಮಿಸಿ ಚಾಲನೆ ನೀಡಿದ ನಂತರ ಕಾಂಗ್ರೆಸ್ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರವನ್ನು ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ನಿಯಂತ್ರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಸನಗೌಡ ತುರ್ವಿಹಾಳ ಅವರು ಅತಿ ಕಡಿಮೆ ಮತಗಳಿಂದ ಪರಾಭವಗೊಂಡ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಅನುಕಂಪದ ಅಲೆ ಅವರ ಪರ ಭಾರೀ ಮತ ಸೆಳೆಯಲು ಅನುಕೂಲವಾಗಬಹುದೆಂಬ ಲೆಕ್ಕಚಾರದ ಮೇಲೆ ಪ್ರತಿ ಬೂತ್ ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕೆ ರಾಜ್ಯ ಮತ್ತು ಜಿಲ್ಲೆಯ ಸ್ಥಳೀಯ ಮುಖಂಡರನ್ನು ನಿಯುಕ್ತಿಗೊಳಿಸಲಾಗಿದೆ.
  ಬಿಜೆಪಿ ಸಹ ಬೂತ್ ಮಟ್ಟದ ಪ್ರಚಾರ ಸಮಿತಿಗಳ ಮೂಲಕ ಈ ಚುನಾವಣೆಯನ್ನು ಪೈಪೋಟಿಯಾಗಿ ಎದುರಿಸುತ್ತಿದೆ. ನಾಳೆ ನಾಮಪತ್ರ ವಾಪಾಸ್ ಪಡೆಯಲು ಕೊನೆ ದಿನವಾಗಿದೆ. ಪ್ರಸ್ತುತ ೧೦ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ನಾಳೆ ಯಾರು ಉಮೇದುವಾರಿಕೆ ಹಿಂಪಡೆಯಲಿದ್ದಾರೆ ಎನ್ನುವುದರ ಮೇಲೆ ಈ ಸಂಖ್ಯೆ ಅವಲಂಬಿತವಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ನೇರಾನೇರ ನಡೆಯಲಿದೆ. ನಾಳೆಯಿಂದ ಚುನಾವಣಾ ಪ್ರಚಾರ ಮತ್ತಷ್ಟು ಬಿರುಸುಗೊಳ್ಳುತ್ತಾ ಸಾಗಲಿದೆ.
  ಜಿಲ್ಲೆಯಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಹೆಚ್ಚುತ್ತಿರುವುದರಿಂದ ಈ ಬಿರು ಬೇಸಿಗೆಯಲ್ಲಿ ಪ್ರಚಾರ ನಿರ್ವಹಣೆ ಎಲ್ಲಾ ಪಕ್ಷಗಳಿಗೂ ಸವಾಲಾಗಿ ಪರಿಣಮಿಸಿದೆ. ಲಿಂಗಸೂಗೂರು, ಸಿಂಧನೂರು, ಮಾನ್ವಿ ಮೂರು ತಾಲೂಕುಗಳನ್ನು ಒಳಗೊಂಡ ರಚಿತಗೊಂಡ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬೆವರಿಳಿಯುವಂತೆ ಮಾಡಿದೆ. ಮುಂದಿನ ೧೫ ದಿನಗಳ ಕಾಲ ಹಂತ ಹಂತವಾಗಿ ಚುನಾವಣೆ ಪ್ರಕ್ರಿಯೆಯೂ ತೀವ್ರಗೊಳಿಸಲು ಭಾರೀ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
  ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪೈಪೋಟಿ ಬಿಜೆಪಿ ವಲಯದಲ್ಲಿ ಭಾರೀ ತಳಮಳಕ್ಕೆಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಾನ ಗೆಲ್ಲಲೇಬೇಕೆಂಬ ಜಿದ್ದಾಜಿದ್ದಿಯಲ್ಲಿ ಪ್ರತಾಪಗೌಡ ಪಾಟೀಲ್ ಅವರು ತಮ್ಮ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ. ಕಳೆದ ಮೂರು ಸಲ ಈ ಕ್ಷೇತ್ರದಲ್ಲಿ ಜಯಗಳಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ರಾಜ್ಯದಲ್ಲಿ ಕಾಂಗ್ರೆಸ್, ಜಾದಳ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದು, ಈಗ ಬಿಜೆಪಿ ಮೂಲಕ ಚುನಾವಣಾ ಸ್ಪರ್ಧೆಗಿಳಿದು ಕ್ಷೇತ್ರದ ಗೆಲುವಿನೊಂದಿಗೆ ಸಚಿವರಾಗುವ ಮಹಾತ್ವಕಾಂಕ್ಷೆ ಹೊಂದಿದ್ದಾರೆ.
  ಮಸ್ಕಿ ವಿಧಾನಸಭಾ ಕ್ಷೇತ್ರದ ಮತದಾರರು ಇನ್ನೂ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಪರ ಮತ ಚಲಾಯಿಸಬಹುದು ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಚುನಾವಣೆಗೆ ಇನ್ನೂ ಕಾಲಾವಕಾಶವಿರುವುದರಿಂದ ಮತದಾರರು ಕಾಂಗ್ರೆಸ್, ಬಿಜೆಪಿ ಸ್ಪರ್ಧೆಯ ತೀವ್ರತೆಯನ್ನು ನಿಗಾವಹಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಹೊಂದಿದ ಬಿಜೆಪಿಗೆ ಈ ಕ್ಷೇತ್ರದಲ್ಲಿ ಈ ಚುನಾವಣಾ ಗೆಲುವಿನ ಸಾಧ್ಯತೆಗಳ ಬಗ್ಗೆ ಲೆಕ್ಕಚಾರ ಆರಂಭಗೊಂಡಿವೆ. ಬಸವನಗೌಡ ಪಾಟೀಲ್ ತುರ್ವಿಹಾಳ ಅವರು ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದ ಅಂತರದಿಂದ ಪರಾಭವಗೊಂಡಿರುವುದು ಈ ಚುನಾವಣೆಯಲ್ಲಿ ಬಹುದೊಡ್ಡ ಅನುಕೂಲವಾಗಿ ಜನರ ಮಧ್ಯೆ ಅಭಿಪ್ರಾಯ ಮೂಡಲು ಕಾರಣವಾಗಿದ್ದು. ಇದು ಮುಂದಿನ ಚುನಾವಣೆವರೆಗೂ ಮುಂದುವರೆಯುವುದೇ ಅಥವಾ ಈ ಅಲೆಯನ್ನು ಬಿಜೆಪಿ ನಿಯಂತ್ರಿಸುವುದೇ? ಎನ್ನುವುದು ಕಾದು ನೋಡಬೇಕಾಗಿದೆ.