ಮಸ್ಕಿ ಉಪ ಚುನಾವಣೆ : ಬಿಜೆಪಿ ೮೫ ಕೋಟಿ – ಕಾಂಗ್ರೆಸ್ ೧೦ ಕೋಟಿ ವೆಚ್ಚದ ಲೆಕ್ಕಚಾರ

 • ಶೇ.೭೦.೪೮ ಮತದಾನ – ಪ್ರತಾಪಗೌಡ, ಬಸವನಗೌಡರ ಮಧ್ಯೆ ಯಾರಿಗೆ ಜಯ?
  ರಾಯಚೂರು.ಏ.೧೮- ಮಸ್ಕಿ ಉಪ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಮತ ಚಲಾವಣೆ ಈಗ ಸೋಲು, ಗೆಲುವಿನ ಲೆಕ್ಕಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮುಳುಗುವಂತೆ ಮಾಡಿದೆ.
  ನಿನ್ನೆ ನಡೆದ ಮಸ್ಕಿ ಉಪ ಚುನಾವಣೆಯ ಮತದಾನದಲ್ಲಿ ೩೦೫ ಬೂತ್‌ಗಳಲ್ಲಿ ನಿರೀಕ್ಷೆ ಮೀರಿ ಮತ ಚಲಾವಣೆಯಾಗಿದೆ. ರಾಜ್ಯದಲ್ಲಿ ನಡೆದ ಬೆಳಗಾವಿ, ಬೀದರ, ಮಸ್ಕಿ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿರುವುದು ವಿಶೇಷವಾಗಿದೆ. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಶೇ.೫೪.೩೫ ರಷ್ಟು ಮತ ಚಲಾವಣೆಯಾಗಿದ್ದರೇ, ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಶೇ.೫೯.೫೭ ರಷ್ಟು ಮತದಾನವಾಗಿದೆ. ಆದರೆ, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೦.೪೮ ರಷ್ಟು ಮತದಾನ ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿ ಪೈಪೋಟಿಗೆ ನಿದರ್ಶನವಾಗಿತ್ತು.
  ಮಸ್ಕಿ ವಿಧಾನಸಭಾ ಕ್ಷೇತ್ರದ ೨,೦೬,೪೨೯ ಕ್ಷೇತ್ರದಲ್ಲಿ ಒಟ್ಟು ಮತದಾರರಲ್ಲಿ ೧,೪೫,೪೯೧ ಜನ ಮತ ಚಲಾಯಿಸಿದ್ದಾರೆ. ೭೩,೩೧೧ ಪುರುಷರು, ೭೨,೧೬೨ ಮಹಿಳೆಯರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ನಿರೀಕ್ಷೆ ಮೀರಿ ಮತ ಚಲಾವಣೆಯಾಗಿದ್ದರಿಂದ ಸೋಲು, ಗೆಲುವಿನ ಲೆಕ್ಕಚಾರ ಈಗ ಎರಡು ಪಕ್ಷಗಳ ತಲೆ ಬಿಸಿಯಾಗುವಂತೆ ಮಾಡಿದೆ. ಅತಿಯಾದ ಮತದಾನದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವ ಬಗ್ಗೆಯೂ ಪರಾಮರ್ಶೆ ತೀವ್ರಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಪೈಪೋಟಿಯಲ್ಲಿದ್ದರೇ, ಉಳಿದ ೬ ಜನ ಪಕ್ಷೇತರ ಅಭ್ಯರ್ಥಿಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ.
  ಇಲ್ಲಿವರೆಗೆ ಜಿಲ್ಲೆಯಲ್ಲಿ ನಡೆದ ಚುನಾವಣೆಗಳಲ್ಲಿ ಅತ್ಯಂತ ದುಬಾರಿ ಚುನಾವಣೆ ಎನ್ನುವ ಖ್ಯಾತಿ ಹೊಂದಿದೆ. ಬಿಜೆಪಿ ಆಂತರಿಕ ವಲಯದ ಮಾಹಿತಿ ಅನ್ವಯ ಚುನಾವಣೆಗೆ ಪಕ್ಷ ೮೫ ಕೋಟಿ ವೆಚ್ಚ ಮಾಡಿದೆಂದು ಹೇಳಲಾಗುತ್ತಿದೆ. ಒಂಟು ವೋಟಿಗೆ ೩೭೦೦ ರೂ. ವೆಚ್ಚ ಮಾಡಿದೆಂದು ಮತದಾನದ ಹಿಂದಿನ ದಿನ ಬಿಜೆಪಿ ಮತವೊಂದಕ್ಕೆ ಸಾವಿರ ರೂ. ಯಿಂದ ಎರಡು ಸಾವಿರ ವರೆಗೂ ಹಣ ವಿತರಿಸಿದ್ದರೇ, ಕಾಂಗ್ರೆಸ್ ಐದು ನೂರು ರೂಪಾಯಿ ವಿತರಿಸಿದೆ. ಬಿಜೆಪಿ ವಿಷಯಾಧರಿತ ಗೆಲುವಿಗಿಂತ ಹಣಾಧಾರಿತ ಗೆಲುವಿನ ನಿರೀಕ್ಷೆಯಲ್ಲಿದೆ.
  ಕಾಂಗ್ರೆಸ್ ಕನಿಷ್ಟ ೮ ರಿಂದ ೧೦ ಕೋಟಿ ವರೆಗೂ ಚುನಾವಣಾ ಖರ್ಚು ವೆಚ್ಚ ಮಾಡಿದೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೇ ಪಕ್ಷಗಳು ಸರಿ ಸುಮಾರು ೯೫ ರಿಂದ ೧೦೦ ಕೋಟಿ ವರೆಗೂ ಮಸ್ಕಿಯಲ್ಲಿ ಹಣ ಖರ್ಚು ಮಾಡಿರುವುದಾಗಿ ಹೇಳಲಾಗುತ್ತಿದೆ. ಬಿಜೆಪಿಗೆ ಪಾಮನಕಲ್ಲೂರು ೭೭ ಗ್ರಾ.ಪಂ.ಗಳ ಮತಗಳ ಬಗ್ಗೆ ಭಯವಿದ್ದರೇ, ಕಾಂಗ್ರೆಸ್ ಗೆಲುವಿಗೆ ಇದೇ ಮತಗಳು ಆಧಾರವೆಂದು ಹೇಳಲಾಗುತ್ತಿದೆ. ೨೦೦೮ ರಿಂದ ನಿರಂತರವಾಗಿ ಜಯಗಳಿಸುತ್ತಾ ಬಂದಿರುವ ಪ್ರತಾಪಗೌಡ ಪಾಟೀಲ್ ಅವರು ನಾಲ್ಕನೇ ಬಾರೀ ನಡೆಯುವ ಈ ಚುನಾವಣೆಯಲ್ಲಿ ಜಯಭೇರಿ ಸಾಧಿಸುವರೇ?.
  ಚುನಾವಣಾ ಪ್ರಚಾರದ ಐದು ದಿನಗಳ ಪೂರ್ವ ಕೊರೊನಾ ಸೋಂಕಿನಿಂದ ಮನೆ ಸೇರಿರುವ ಪ್ರತಾಪಗೌಡ ಪಾಟೀಲ್ ಅವರಿಗೆ ಕೊರೊನಾ ಗೆಲುವಿಗೆ ನೆರವಾಗುವುದೇ ಅಥವಾ ಹೊರೆಯಾಗುವುದೇ? ಎಂದು ಕಾದು ನೋಡುವಂತೆ ಮಾಡಿದೆ. ಕಾಂಗ್ರೆಸ್ಸಿನ ಅಭ್ಯರ್ಥಿ ಬಸವನಗೌಡ ತುರ್ವಿಹಾಳ ಅವರ ಪರ ಆರಂಭದಿಂದಲೂ ಅನುಕಂಪದ ಅಲೆ ಮತದಾನದ ಕೊನೆ ದಿನವೂ ಅವರ ಪರವಾಗಿಯೇ ಇತ್ತೆ ಎನ್ನುವುದು ಈಗ ಕಾಂಗ್ರೆಸ್ಸಿನವರ ಚಿಂತೆಯಾಗಿದೆ. ಶೇ.೭೦ ರಷ್ಟು ಮತದಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ , ಬಿಜೆಪಿಯವರಿಗೆ ಗೊಂದಲ ಆರಂಭಗೊಂಡಿದೆ.
  ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡಿದ ಬಿಜೆಪಿ ನೇರವಾಗಿ ಮತಗಳನ್ನೇ ಖರೀದಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಅನುಕಂಪದ ಅಲೆ ಏನಾಗಿರಬಹುದು ಎನ್ನುವುದು ಕಾಂಗ್ರೆಸ್ಸಿನಲ್ಲಿ ಭಾರೀ ತಳಮಳಕ್ಕೆ ಕಾರಣವಾಗಿದೆ. ಮತದಾರರ ರಹಸ್ಯ ಅತ್ತ ಬಿಜೆಪಿ, ಇತ್ತ ಕಾಂಗ್ರೆಸ್ಸಿನ ಮಧ್ಯೆ ಈಗ ಭಾರೀ ಲೆಕ್ಕಚಾರದಲ್ಲಿ ತೊಡಗಿದೆ. ಸೋಲು, ಗೆಲುವಿನ ಅನುಮಾನಗಳ ಮಧ್ಯೆಯೂ ಗೆಲ್ಲುವುದು ನಾವೇ ಎನ್ನುವ ಪ್ರತಿಪಾದನೆ ಈಗ ಬೆಟ್ಟಿಂಗ್‌ಗೆ ದಾರಿ ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ನಾಯಕರು ಭಾರೀ ಪ್ರಮಾಣದ ಬೆಟ್ಟಿಂಗ್‌ಗೆ ಸೈ ಎನ್ನುವತ್ತ ಸಾಗಿದ್ದಾರೆ.
  ಒಟ್ಟಾರೆಯಾಗಿ ಮಸ್ಕಿ ಚುನಾವಣೆ ಈಗ ಜನರ ಕುತೂಹಲದ ಕೇಂದ್ರವಾಗಿದೆ. ಘಟಾನುಘಟಿ ನಾಯಕರ ಪ್ರಚಾರ ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮಧ್ಯದ ಜಿದ್ದಾಜಿದ್ದಿ ಫಲಿತಾಂಶದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. ಮೇ.೨ ರಂದು ಮತ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿವರೆಗೂ ಈ ಕುತೂಹಲದ ನಿರೀಕ್ಷೆಯಲ್ಲಿ ಕಾಯುವಂತೆ ಮಾಡಿದೆ.