ಮಸ್ಕಿ ಉಪ ಚುನಾವಣೆ : ಫಲಿತಾಂಶ ಕುತೂಹಲ – ಭಾರೀ ಬೆಟ್ಟಿಂಗ್

ಬಿಜೆಪಿಗಿಂತ ಕಾಂಗ್ರೆಸ್ ಅಭ್ಯರ್ಥಿ ಪರ ತೀವ್ರಗೊಂಡ ಬೆಟ್ಟಿಂಗ್
ರಾಯಚೂರು.ಏ.೨೬- ಮಸ್ಕಿ ವಿಧಾನಸಭಾ ಚುನಾವಣೆ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತಾಂಡವಕ್ಕೆ ಕಾರಣವಾಗಿದ್ದರೇ, ಈಗ ಮತ ಎಣಿಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಬೆಟ್ಟಿಂಗ್ ತಾರಕಕ್ಕೇರಿದೆ.
ಏ.೧೭ ರಂದು ಮಸ್ಕಿ ವಿಧಾನಸಭೆಗೆ ಚುನಾವಣೆ ನಡೆಸಲಾಯಿತು. ಜಿದ್ದಾಜಿದ್ದಿ ಪೈಪೋಟಿಯ ಈ ಚುನಾವಣೆಯಲ್ಲಿ ಸೋಲು, ಗೆಲುವಿನ ಬಗ್ಗೆ ಭಾರೀ ಕುತೂಹಲ ಮೂಡಿದೆ. ಮೇ.೨ ಕ್ಕೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಚುನಾವಣೆ ನಂತರ ಒಂದಷ್ಟು ದಿನ ವಿಶ್ರಾಂತಿ ಪಡೆದ ಜನ ಈಗ ಬೆಟ್ಟಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ. ಮಸ್ಕಿಯ ಕಾಂಗ್ರೆಸ್, ಬಿಜೆಪಿ ಪಕ್ಷದವರು ಮಾತ್ರವಲ್ಲದೇ, ರಾಜಕೀಯ ಆಸಕ್ತ ಜನರು ಈ ಚುನಾವಣೆಯಲ್ಲಿ ಮಗ್ನರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಮಧ್ಯೆ ಬೆಟ್ಟಿಂಗ್ ಜೋರಾಗಿ ಸಾಗಿದೆ.
ಆಡಳಿತರೂಢ ಬಿಜೆಪಿ ಪಕ್ಷಗಿಂತ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಒಂದು ನೂರು ಕೋಟಿ ರೂ. ವೆಚ್ಚವಾಗಿರುವುದು ಇತಿಹಾಸವಾಗಿದೆ. ಬೆಟ್ಟಿಂಗ್ ಮೊತ್ತವೂ ಸಹ ಅಷ್ಟೇ ಬಿರುಸುನಿಂದ ಸಾಗಿದೆ. ಮಸ್ಕಿಯಲ್ಲಿ ಬೆಟ್ಟಿಂಗ್ ಬಗ್ಗೆ ಚರ್ಚೆಯನ್ನಾಧರಿಸಿ ಹೇಳುವುದಾದರೇ, ಈಗಾಗಲೇ ಬೆಟ್ಟಿಂಗ್ ಮೊತ್ತ ೩ ರಿಂದ ೪ ಕೋಟಿ ದಾಟಿದೆಂದು ಹೇಳಲಾಗುತ್ತಿದೆ. ಕೆಲವೆಡೆ ಒಂದಕ್ಕೆ ಒಂದು ಬೆಟ್ಟಿಂಗ್ ನೀಡಿದರೇ, ಇನ್ನೂ ಕೆಲವೆಡೆ ಒಂದಕ್ಕೆ ಎರಡು ಬೆಟ್ಟಿಂಗ್ ನೀಡಲಾಗುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರು ಗಮನಿಸಿದರೇ, ಚುನಾವಣೆ ಜಿದ್ದಾಜಿದ್ದಿಯಾಗಿರುವುದು ಸ್ಪಷ್ಟವಾಗಿದೆ. ಆದರೆ, ಈ ಸಲ ಮತದಾರರ ಒಲವು ಯಾರ ಪರ ಇತ್ತು ಎನ್ನುವುದು ಮಾತ್ರ ನಿಗೂಢವಾಗಿದೆ. ೨೦೦೮ ರಿಂದ ೨೦೧೮ ರವರೆಗೆ ಮೂರು ಅವಧಿಗೆ ಪ್ರತಾಪಗೌಡ ಪರ ನಿಂತ ಮತದಾರರರು ಈ ಸಲ ಯಾವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ೨೦೧೮ ರ ಚುನಾವಣೆಯಲ್ಲಿ ಗೆಲುವಿನ ಅಂತರ ಕೇವಲ ೨೧೩ ಮತಗಳ ಅತಿ ಕಡಿಮೆ ಇರುವುದರಿಂದ ಉಪ ಚುನಾವಣೆಯ ಫಲಿತಾಂಶ ಅಂದಾಜಿಗೆ ಮೀರಿ ನಿಂತಿದೆ. ಇದು ಈಗ ಬೆಟ್ಟಿಂಗ್‌ಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಬಹುತೇಕ ಕಡೆ ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದ್ದರೇ, ಮಸ್ಕಿಯಲ್ಲಿ ಮಾತ್ರ ಏನಿದ್ದರೂ, ಉಪ ಚುನಾವಣೆಯದ್ದೇ ಬೆಟ್ಟಿಂಗ್ ಜೋರಾಗಿದೆ. ಮತ ಎಣಿಕೆ ಪ್ರಕ್ರಿಯೆಗೆ ಇನ್ನೂ ಆರು ದಿನಗಳ ಬಾಕಿಯಿದೆ. ಈ ಆರು ದಿನಗಳಲ್ಲಿ ಇನ್ನೆಷ್ಟು ಬೆಟ್ಟಿಂಗ್ ನಡೆಯಲಿದೆ ಎನ್ನುವುದು ಕಾದು ನೋಡಬೇಕಾಗಿದೆ.