ಮಸ್ಕಿ ಉಪ ಚುನಾವಣೆ : ನ.23 ಕಾಂಗ್ರೆಸ್ ಸಮಾವೇಶ – ಬಿಜೆಪಿಗೆ ಸೆಡ್ಡು

ಪ್ರತಾಪಗೌಡ – ಬಸವನಗೌಡ‌ ಪೈಪೋಟಿ : ಸಿದ್ಧಗೊಳ್ಳುತ್ತಿರುವ ರಾಜಕೀಯ ಅಖಾಡ
ರಾಯಚೂರು.ನ.22- ಮಸ್ಕಿ ಉಪ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಿದ್ದಾಜಿದ್ದಿ ಪೈಪೋಟಿಗಿಳಿದಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರ ಈಗ ಭಾರೀ ರಾಜಕೀಯ ರಂಗು ಪಡೆದುಕೊಂಡಿದೆ.
ಇತ್ತೀಚಿಗಷ್ಟೇ ಮಸ್ಕಿಯಲ್ಲಿ ಬಿಜೆಪಿಯ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು. ಅದರ ಬೆನ್ನಹಿಂದೆಯೇ ಕಾಂಗ್ರೆಸ್ ಸಮಾವೇಶ ನಾಳೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಸ್ಪರ್ಧಿಸಿದ ಅಭ್ಯರ್ಥಿಗೆ ಈ ಸಲ ಟಿಕೇಟ್ ನೀಡಿ, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪ್ರಚಾರ ನಡೆಸುವ ರಾಜಕೀಯ ಸಂದಿಗ್ಧತೆ ಈ ಚುನಾವಣೆಯಲ್ಲಿ ನಡೆಯಲಿದೆ. ಸರದಿ ಉಪ ಚುನಾವಣೆ ಸೋಲಿನ ಕೈಯಿಂದ ತೀವ್ರ ಇಕ್ಕಟ್ಟಿನಲ್ಲಿರುವ ಕಾಂಗ್ರೆಸ್ಸಿಗೆ ಮಸ್ಕಿ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದ್ದರೇ, ಬಹುತೇಕ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ಸಿಗೆ ರಾಜ್ಯದಲ್ಲಿ ತನ್ನ ಪ್ರಾಬಲ್ಯ ತೋರಿಸುವುದು ಮತ್ತೊಂದು ಪ್ರತಿಷ್ಠೆಯಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರತಾಪಗೌಡ ಪಾಟೀಲ್ ಅವರ ಪರ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದ್ದರು. ಈಗ ಈ ಚುನಾವಣೆಯಲ್ಲಿ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದರಿಂದ ಅವರ ವಿರುದ್ಧ ಸಮರ ನಡೆಸಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದ ಬಸವನಗೌಡ ತುರ್ವಿಹಾಳ ಅವರ ವಿರುದ್ಧ ಬಿಜೆಪಿ ಚುನಾವಣೆ ಪ್ರಚಾರ ನಿರ್ವಹಿಸಬೇಕಾಗಿದೆ. ಬಸವನಗೌಡ ತುರ್ವಿಹಾಳ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಉರುಪು ತೀವ್ರಗೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 213 ಮತ ಅಂತರದಿಂದ ಪರಾಭವಗೊಂಡಿದ್ದ ಬಸವನಗೌಡ ತುರ್ವಿಹಾಳ ಅವರನ್ನು ಉಳಿಸಿಕೊಳ್ಳಲು ಬಿಜೆಪಿ ಏನೆಲ್ಲಾ ಕಸರತ್ತು ನಡೆಸಿದರೂ, ಕೊನೆಗೂ ಉಪಯೋಗವಾಗಲಿಲ್ಲ. ಕಾಂಗ್ರೆಸ್ಸಿಗರು ಪ್ರಬಲ ಅಭ್ಯರ್ಥಿಯ ಕೊರತೆಯಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ಸವಾಲ್ ಎದುರಿಸುವ ಸಂಕಷ್ಟದಲ್ಲಿರುವಾಗ ತುರ್ವಿಹಾಳ ಅವರ ಪಕ್ಷ ಸೇರ್ಪಡೆ ಕಾಂಗ್ರೆಸ್ಸಿಗೆ ಬಲಬರುವಂತೆ ಮಾಡಿದೆ. ನ.23 ರಂದು ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಉಪ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀ‌ಡಲಿದೆ.
ಬಸವನಗೌಡ ತುರ್ವಿಹಾಳ ಅವರಿಗೆ ಬಿಜೆಪಿ ಪಕ್ಷದಲ್ಲಿ ಬಹುದೊಡ್ಡ ಬೆಂಬಲಿಗರ ಸಂಖ್ಯೆ ಇದ್ದು, ಈ ಎಲ್ಲರನ್ನು ಕಾಂಗ್ರೆಸ್ಸಿನತ್ತ ಸೆಳೆಯುವ ಪ್ರಯತ್ನದ ಭಾಗವಾಗಿ ಈ ಸಮಾವೇಶ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಬಸವನಗೌಡ ತುರ್ವಿಹಾಳ ಅವರು ಕಣಕ್ಕಿಳಿಯುತ್ತಿರುವ ಕಾರಣಕ್ಕೆ ಬಿಜೆಪಿ ಭಾರೀ ತಳಮಳದಲ್ಲಿದೆ. ಬಸವನಗೌ‌ಡ ಬೆಂಬಲಿಗರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಅಹೋರಾತ್ರಿ ಕಸರತ್ತು ನಡೆಸಲಾಗುತ್ತದೆ. ಕಳೆದ ಎರಡು ದಿನಗಳ ಹಿಂದೆ ಜನಪ್ರತಿನಿಧಿಗಳು ಕೆಲ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡ ಬಿಜೆಪಿಯ ಜಿಲ್ಲಾ ಪಂಚಾಯತ ಅಭ್ಯರ್ಥಿಗಳನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಭಾರೀ ಚರ್ಚೆ ನಡೆಸುವಂತಹ ಪ್ರಸಂಗ ನಿರ್ಮಾಣವಾಗಿದೆ.
ಒಟ್ಟಾರೆಯಾಗಿ ಬಿಜೆಪಿ ಪಕ್ಷಕ್ಕೆ ಬಸವನಗೌಡ ಅವರ ಬಿಜೆಪಿ ಸಂಪರ್ಕದ ನಾಯಕತ್ವ ಕೊಂಡಿ ಮುರಿಯುವುದು ಬಹುದೊಡ್ಡ ಸವಾಲಾಗಿದೆ. ಪ್ರತಾಪಗೌಡ ಪಾಟೀಲ್ ಅವರು ಕಾಂಗ್ರೆಸ್ಸಿನಿಂದ ವಲಸೆ ಬಂದಿದ್ದರಿಂದ ಅವರನ್ನು ಸ್ವೀಕರಿಸಲು ಬಿಜೆಪಿಯ ಕೆಲ ನಾಯಕರಿಗೆ ಕಷ್ಟವಾಗಿದೆ. ಈ ಅಸಮಾಧಾನ ಪ್ರತಾಪಗೌಡ ಪಾಟೀಲ್ ಅವರಿಗೆ ಮುಂಬರುವ ಉಪ ಚುನಾವಣೆ ಮುಳುವಾಗಬಹುದೆಂಬ ಲೆಕ್ಕಚಾರ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಮಸ್ಕಿ ಉಪಚುನಾವಣೆ ಘೋಷಣೆ ಪೂರ್ವ ಪ್ರತಾಪಗೌಡ ಪಾಟೀಲ್ ಅವರು ಬಿಜೆಪಿಯಲ್ಲಿ ತಮ್ಮ ಪರ ಎಲ್ಲಾ ನಾಯಕರನ್ನು ಮನವೊಲಿಸಿಕೊಳ್ಳುವ ಪ್ರಯತ್ನ ಒಂದೆಡೆ ನಡೆಸಿದ್ದರೇ, ಮತ್ತೊಂದುಕಡೆ ಕಾಂಗ್ರೆಸ್ ಬಿಜೆಪಿಯಲ್ಲಿರುವ ಬಸವನಗೌಡ ತುರ್ವಿಹಾಳ ಅವರ ಬೆಂಬಲಿಗರ ಪಡೆ ಹೊರ ತರಲು ಪ್ರಯತ್ನ ನಡೆಸಿದ್ದು, ಇದು ಚುನಾವಣಾ ಕಣಕ್ಕೆ ಎಲ್ಲಿಲ್ಲದ ರಂಗು ಬರುವಂತೆ ಮಾಡಿದೆ.