ಮಸ್ಕಿ ಉಪಸಮರ : ಬಿಜೆಪಿ ಪ್ರತಾಪಕ್ಕೆ ಕಾಲು ಕೆದರಿದ ಬಸವ – ಗೌಡರ ಗದ್ಲ

ಕಾಡಾಧ್ಯಕ್ಷ ಸ್ಥಾನಕ್ಕೆ ಬಸವನಗೌಡ ರಾಜೀನಾಮೆ : ಕಾಂಗ್ರೆಸ್ಸಿಗೆ ಪ್ರಬಲ ಅಭ್ಯರ್ಥಿ
ರಾಯಚೂರು.ನ.08- ತೀವ್ರ ಕುತೂಹಲ ಕೆರಳಿಸಿದ ಮಸ್ಕಿ ಉಪಸಮರಕ್ಕೆ ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆ ಸಂಭವ ಸಾಧ್ಯತೆ ನಿರೀಕ್ಷೆ ಮಧ್ಯೆ ಕಾಂಗ್ರೆಸ್ ಪಕ್ಷ, ಪ್ರಬಲ ಮುಖಂಡರು ಹಾಗೂ ಕಳೆದ ಚುನಾವಣೆಯಲ್ಲಿ ಕೇವಲ 213 ಮತ ಅಂತರದಿಂದ ಪರಾಭವಗೊಂಡು ಬಸವನಗೌಡ ಅವರನ್ನು ಪಕ್ಷಕ್ಕೆ ಸೆಳೆದು ಮೊದಲ ಹಂತದ ಯಶಸ್ವಿ ಸಾಧಿಸಿದೆ.
ಕಾಡಾಧ್ಯಕ್ಷರಾಗಿದ್ದ ಬಸವನಗೌ‌ಡ ತುರ್ವಿಹಾಳ ಅವರು ನಿನ್ನೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು. ಈ ಪೂರ್ವ ಕಾಡಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರುವ ಮೂಲಕ ಮಸ್ಕಿ ಉಪಸಮರಕ್ಕೆ ಭಾರೀ ಪೈಪೋಟಿಗೆ ಮುಂದಾಗಿದ್ದಾರೆ. 2018 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಉಪಸಮರದಲ್ಲಿ ಅದಲಿ ಬದಲಿಗೊಂಡು ಇಬ್ಬರ ಗೌಡರ ಮಧ್ಯೆ ಗದ್ದಲದ ನಾಟಕ ನಡೆಯಲಿದೆ.
ಕಾಂಗ್ರೆಸ್ ಪಕ್ಷದಿಂದ ಅತ್ಯಂತ ಕಡಿಮೆ ಅಂತರ ಮತಗಳಿಂದ ಜಯಗಳಿಸಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು, ಸಚಿವಾಕಾಂಕ್ಷಿಯೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪ‌ಡೆಗೊಂಡರೇ, ಇದಕ್ಕೆ ಪ್ರತಿತಂತ್ರ ಎನ್ನುವಂತೆ ಬಸವನಗೌಡ ಅವರನ್ನು ಕಾಡಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿ, ಕಾಂಗ್ರೆಸ್ಸಿಗೆ ಸೆಳೆಯುವ ಮೂಲಕ ಸಮರದ ಬಿಗುವು ಕಾಯ್ದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಬಸವನಗೌಡ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಉಳಿಸಿಕೊಳ್ಳಲು ಏನೆಲ್ಲಾ ತಂತ್ರಗಳು ಬಿಜೆಪಿಯಿಂದ ನಡೆದರೂ, ಚುನಾವಣೆಯ ಹಂತದಲ್ಲಿ ಬೆಂಬಲಿಗರ ಒತ್ತಾಯಕ್ಕೆ ಮಣಿದ ಬಸವನಗೌಡ ತುರ್ವಿಹಾಳ ಅವರು ಕಾಂಗ್ರೆಸ್ ಸೇರುವ ಮೂಲಕ ಪ್ರತಾಪಗೌಡ ಪಾಟೀಲ್ ಅವರಿಗೆ ಸೆಡ್ಡು ಹೊಡೆದಿದ್ದಾರೆ.
ಉಪಸಮರ ಗೆದ್ದು, ರಾಜ್ಯ ಸರ್ಕಾರದ ಸಂಪುಟ ಸೇರುವ ಕನಸಿಗೆ ಯಾವುದೇ ಭಂಗವಾಗದಂತೆ ಭಾರೀ ಮುನ್ನೆಚ್ಚರಿಕೆಯೊಂದಿಗೆ ರಾಜಕೀಯವಾಗಿ ಬಸವನಗೌಡ ತುರ್ವಿಹಾಳ ಅವರಿಗೆ ಕಾಡಾಧ್ಯಕ್ಷ ಸ್ಥಾನ ದೊರೆಯುವಂತೆ ಮಾಡಲಾಗಿತ್ತು. ಕಳೆದ ಒಂದು ವರ್ಷದಿಂದ ಬಸವನಗೌಡ ಪಾಟೀಲ್ ಅವರು ಕಾಂಗ್ರೆಸ್ ಸೇರುವ ವದಂತಿ ತೀವ್ರವಾಗಿದ್ದವು. ಆದರೆ, ಬಿಜೆಪಿಯ ಪ್ರಭಾವಿ ಮುಖಂಡರು ಬಸವನಗೌಡ ಅವರನ್ನು ಮನವೊಲಿಸಿ, ಇಲ್ಲಿವರೆಗೂ ಹಿಡಿದಿಟ್ಟುಕೊಂಡಿದ್ದರು. ಆದರೆ, ಕ್ಷೇತ್ರದಲ್ಲಿ ಅವರ ಬೆಂಬಲಿಗರ ನಿರೀಕ್ಷೆ ಭಿನ್ನವಾಗಿತ್ತು.
ಮುಖ್ಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತ ಅಂತರಗಳಿಂದ ಪರಾಭವಗೊಂಡ ಬಸವನಗೌಡ ಅವರು ಉಪ ಚುನಾವಣೆ ಮೂಲಕ ಶಾಸಕರಾಗುವ ಒತ್ತಡ ತೀವ್ರವಾಗಿತ್ತು. ಪ್ರತಾಪಗೌಡ ಪಾಟೀಲ್ ಅವರ ವಿರುದ್ಧ ಕ್ಷೇತ್ರದಲ್ಲಿ ಭಾರೀ ಅಲೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ಸಿಗೆ ಬಸವನಗೌಡ ತುರ್ವಿಹಾಳ ಮಾತ್ರ ಪ್ರಬಲ ಅಭ್ಯರ್ಥಿ ಎನ್ನುವ ನಿರ್ಧಾರದೊಂದಿಗೆ ಒಂದೆಡೆ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಗೆ ಒತ್ತಾಯಿಸಿದರೇ, ಮತ್ತೊಂದೆಡೆ ಕಾಂಗ್ರೆಸ್ಸಿನವರು ಅವರನ್ನು ಸೆಳೆಯುವ ಭಾರೀ ಭಗೀರಥ ಯತ್ನ ನಡೆಸಿದರು. ಈ ಎಲ್ಲಾ ಪ್ರಯತ್ನಗಳು ನಿನ್ನೆ ಸಹಕಾರಗೊಂಡಿದೆ.
ಕಳೆದ ಒಂದು ವಾರದಿಂದ ನಡೆದ ರಾಜಕೀಯ ಕ್ಷೀಪ್ರ ಬೆಳವಣಿಗೆಯಲ್ಲಿ ಕೊನೆಗೂ ಬಸವನಗೌಡ ಅವರು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿ, ಮಸ್ಕಿ ಕ್ಷೇತ್ರ ರಣಾಂಗವಾಗಿ ಮಾರ್ಪಡುವಂತೆ ಮಾಡಿದ್ದಾರೆ. ಬಸವನಗೌಡ ತುರ್ವಿಹಾಳ ಅವರು ಕಾಂಗ್ರೆಸ್ ಸೇರ್ಪಡೆ ಬಿಜೆಪಿಯಲ್ಲಿ ಭಾರೀ ತಳಮಳಕ್ಕೆ ಕಾರಣವಾಗಿದೆ. ಪ್ರತಾಪಗೌಡ ಪಾಟೀಲ್ ಅವರ ಪಾಲಿಗೆ ಈ ರಾಜಕೀಯ ಬೆಳವಣಿಗೆ ಭಾರೀ ಆತಂಕವನ್ನೇ ಮೂಡಿಸಿದೆ.
ಬಸವನಗೌಡ ಸೇರ್ಪಡೆ ಮೂಲಕ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲ ಅಭ್ಯರ್ಥಿಯನ್ನು ಸೆಳೆಯುವ ಮೂಲಕ ಯಾರನ್ನು ಕಣಕ್ಕಿಳಿಸಬೇಕೆಂಬ ಸವಾಲಿಗೆ ಉತ್ತರ ಕಂಡುಕೊಂಡಿದೆ. ಒಟ್ಟಾರೆಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಪ್ರತಾಪಗೌಡ ಪಾಟೀಲ್, ಬಿಜೆಪಿಯಿಂದ ಬಸವನಗೌಡ ತುರ್ವಿಹಾಳ ಅವರು ಕಣದಲ್ಲಿದ್ದರು. ಈಗ ಈ ಚುನಾವಣೆಯಲ್ಲಿ ಈ ಚಿತ್ರ ಅದಲಿ ಬದಲಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರ್ವಿಹಾಳ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು ಮತ್ತೇ ಚುನಾವಣಾ ಕದನಕ್ಕಿಳಿಯಲಿದ್ದು, ಇವರಲ್ಲು ಯಾರು ಉಪ ಸಮರ ಗೆಲ್ಲುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.