ಮಸ್ಕಿ ಉಪಚುನಾವಣೆ ಬಹಿರಂಗವಾಗಿ ಹಣ ಹಂಚಿಕೆ

*ಕಲಂ ೩೨೪ರ ಪ್ರಕಾರ ಚುನಾವಣೆ ರದ್ದು ಮಾಡಲು ಎಂ.ಎಂ.ವಿರುಪಾಕ್ಷಿ
ರಾಯಚೂರು.ಏ.೧೬-ಮಸ್ಕಿ ಉಪಚುನಾವಣೆಯನ್ನು ಅಧಿಕಾರದ ಅಮಲಿನಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಹಿರಂಗವಾಗಿ ಹಣ ಹಂಚತಿರುವುದರಿಂದ ಕೊಡಲೇ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಎಂ.ವಿರುಪಾಕ್ಷಿ ಅವರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರಿಗೆ ಬಹಿರಂಗವಾಗಿ ಹಣ ಹಾಸನ ಮೂಲದ ಜಿಜೆಪಿ ಕಾರ್ಯಕರ್ತರು ಹಂಚುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ಮತದಾರರಿಗೆ ಹಂಚುವ ಮೂಲಕ ಆಮೀಷ ಒಡ್ಡಿ ಪ್ರಜಾಪ್ರಭುತ್ವದ ಆಶಯವನ್ನೇ ಕಗ್ಗೊಲೆ ಮಾಡಿದ್ದಾರೆ. ಹಾಸನ ಮೂಲದ ನೂರಾರು ಕಾರ್ಯಕರ್ತರು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರ ಪರ ಹಣ ಹಂಚಿರುವುದು ವಿಡಿಯೋ ಮೂಲಕ ಬಹಿರಂಗವಾಗಿದ್ದು,
ಇವರಿಗೆ ಐಪಿಸಿ ೧೭೧ರ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ.
ಸಂವಿಧಾನ ಬದ್ಧವಾಗಿ ಮತದಾನದ ಅವಕಾಶ ನೀಡಬೇಕಾಗಿತ್ತು. ಆದರೆ, ಕಾನೂನು ವಿರೋಧಿ ಕ್ರಿಯೆಗಳನ್ನು ನಡೆಸಿ ಚುನಾವಣೆಯ ಆಶಯವನ್ನೇ ಬುಡಮೇಲು ಮಾಡಿದ್ದಾರೆ. ಸ್ವತಃ ಸಿಎಂ ಯಡಿಯೂರಪ್ಪನವರು ಮಸ್ಕಿ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸಿಎಂ ಆಗಿರುವುದೇ ಪ್ರತಾಪಗೌಡರಿಂದ ಎಂಬ ಭಾವನೆಯ ಮೂಲಕ ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ.
ಚುನಾವಣಾ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಜಿಲ್ಲೆಯ ಅಧಿಕಾರಿಗಳ ಮೂಲಕ ಚುನಾವಣೆಯನ್ನು ತಮ್ಮ ಪರವಾಗಿ ನಡೆಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಡ್ಡು ಇದ್ದವರೇ ರಾಜನಾಗುವ ವ್ಯವಸ್ಥೆ ಬಿಜೆಪಿ ಪಕ್ಷ ನೋಡುತ್ತಿದೆ. ಇದರ ವಿರುದ್ಧ ಈಗಾಗಲೇ ಕಾಂಗ್ರೆಸ್ ಪಕ್ಷ ದೂರು ಸಲ್ಲಿಸಿದೆ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ದುಡ್ಡು ಹಂಚಿರುವುದು ಕಂಡುಬಂದಿದೆ. ಇದರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಇಡೀ ಕ್ಷೇತ್ರವೇ ದುಡ್ಡಿನ ಹೊಳೆಯಲ್ಲಿ ತುಂಬಿ ತುಳುಕುತ್ತಿದ್ದು, ೨೦೧೭ರಲ್ಲಿ ತಮಿಳುನಾಡಿನ ಆರ್.ಕೆ.ನಗರ ಉಪಚುನಾವಣೆ ಇದೇ ಮಾದರಿಯಲ್ಲಿ ನಡೆದ ಹಿನ್ನೆಲೆ ಆ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಸಹ ರದ್ದುಮಾಡುವ ಮೂಲಕ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಬೇಕು.
ಈ ಉಪಚುನಾವಣೆಯು ಕಲಂ ೩೨೪ರ ಪ್ರಕಾರ ಕೊಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಎನ್.ಶಿವಶಂಕರ ವಕೀಲ,ಹಿರಿಯ ಮುಖಂಡ ಯುಸೂಫ್‌ಖಾನ್, ದಾನಪ್ಪ ಯಾದವ್, ತಿಮ್ಮಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.