ಮಸೂದ್- ಫಾಜಿಲ್ ನಿವಾಸಕ್ಕೆ ಶೀಘ್ರ ಭೇಟಿ: ಸಿಎಂ

ಬೆಂಗಳೂರು, ಆ. ೧- ಕರಾವಳಿಯಲ್ಲಿ ಹತ್ಯೆಯಾಗಿರುವ ಮಸೂದ್ ಮತ್ತು ಫಾಜಿಲ್ ಅವರ ನಿವಾಸಗಳಿಗೆ ಮುಂದಿನ ದಿನಗಳಲ್ಲಿ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇವರಿಬ್ಬರ ನಿವಾಸಕ್ಕೆ ಭೇಟಿ ನೀಡದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿಗಳಿಂದ ಈ ಸ್ಪಷ್ಟೀಕರಣ ಹೊರಬಿದ್ದಿದೆ.
ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ ಬೇಧ-ಭಾವ ಮಾಡುವ ಪ್ರಶ್ನೆಯೇ ಇಲ್ಲ, ನಾವು ರಾಷ್ಟ್ರೀಯತೆಯನ್ನು ಪಾಲಿಸುತ್ತೇವೆ. ಮುಂದಿನ ದಿನಗಳಲ್ಲಿ ಮಸೂದ್ ಮತ್ತು ಫಾಜಿಲ್ ಮನೆಗೂ ಭೇಟಿ ನೀಡುತ್ತೇನೆ ಎಂದರು.
ಈ ಹಿಂದಿನ ಸರ್ಕಾರಗಳು ಕೊಲೆಗಳಾದಾಗ ಹೇಗೆಲ್ಲ ನಡೆದುಕೊಂಡಿವೆ ಎಂಬುದು ನಮಗೆ ಗೊತ್ತಿದೆ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಸದ್ಯದಲ್ಲೇ ಎನ್‌ಐಎಗೆ
ಬೆಳ್ಳಾರೆಯ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ. ತಾಂತ್ರಿಕ ಕಾರಣಗಳಿಂದ ವರ್ಗಾವಣೆ ಪ್ರಕ್ರಿಯೆ ತಡವಾಗಿದೆ. ಕೆಲವೊಂದು ಕಾನೂನು ಸಡಿಲಿಸುವ ಅಗತ್ಯವೂ ಇದೆ. ಸದ್ಯದಲ್ಲೇ ಎನ್‌ಐಎಗೆ ಈ ಪ್ರಕರಣವನ್ನು ವರ್ಗಾಯಿಸುತ್ತೇವೆ. ಅನೌಪಚಾರಿಕವಾಗಿ ಎನ್‌ಐಎ ಅವರಿಗೆ ಮಾಹಿತಿ ನೀಡಿದ್ದೇವೆ. ಈಗಾಗಲೇ ಎನ್‌ಐಎ ಅಧಿಕಾರಿಗಳು ಮಂಗಳೂರಿನಲ್ಲಿದ್ದು, ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.ಇಂದು ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದೇನೆ. ಇಲ್ಲಿ ಅಭಿವೃದ್ಧಿಗಾಗಿ ೧೦೦ ಕೋಟಿ ರೂ. ಒದಗಿಸಿದ್ದೇನೆ. ಈ ಬಗ್ಗೆ ಇಂದು ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದರು.
ಆಪತ್ತಿಲ್ಲ ಆ. ೩ ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಯುತ್ತಿರುವುದಕ್ಕೆ ನಮ್ಮ ಆಪತ್ತಿಲ್ಲ. ಅವರು ಮಾಡಲಿ ಆಪತ್ತೇನೂ ಇಲ್ಲ. ನಾನು ಅಂದು ದಾವಣಗೆರೆಯಲ್ಲೇ ಇರುತ್ತೇನೆ. ಶರಣ ಸಿದ್ದರಾಮೋತ್ಸವ ದೇವರ ಉತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ. ನಮ್ಮದು ದೇವರ ಉತ್ಸವ ಎಂದರು.
ಜಿಲ್ಲೆಗಳಲ್ಲಿ ಜನೋತ್ಸವ
ರಾಜ್ಯಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಪ್ರಾದೇಶಿಕವಾರು ಅಥವಾ ಜಿಲ್ಲಾವಾರು ಜನೋತ್ಸವ
ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆದಿದೆ. ಪಕ್ಷ ಈ ಬಗ್ಗೆ ಎಲ್ಲ ಮಾಹಿತಿಯನ್ನೂ ಪ್ರಕಟಿಸುತ್ತದೆ ಎಂದರು.