ಮಸೂದ್ ನಿವಾಸಕ್ಕೆ ತೆರಳದ ಸಿಎಂ ಕ್ರಮಕ್ಕೆ ಖರ್ಗೆ ಆಕ್ಷೇಪ


ಬೆಂಗಳೂರು,ಜು. ೩೧- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದು ರಾಜ್ಯಕ್ಕೆ ಮಾರಕ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ನಿರಾಳ ಮನಸ್ಸಿನಿಂದ ಇರುತ್ತಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಮಸೂದ್ ನಿವಾಸಕ್ಕೆ ತೆರಳದ ಮುಖ್ಯಮಂತ್ರಿ ಬೊಮ್ಮಾಯಿ ಕ್ರಮಕ್ಕೆ ಕಿಡಿಕಾರಿದರು.
ಹಿಂದೂ-ಮುಸ್ಲಿಂ ಯಾರೇ ಇರಲಿ ಸರ್ಕಾರ ಎಲ್ಲರನ್ನೂ ನಿಷ್ಪಕ್ಷಪಾತವಾಗಿ ನೋಡಬೇಕು. ಒಬ್ಬರ ಮನೆಗೆ ಹೋಗಿ, ಇನ್ನೊಬ್ಬರ ಮನೆಗೆ ಹೋಗದಿರುವುದು ಸರಿಯಲ್ಲ. ಒಬ್ಬರಿಗೆ ರಕ್ಷಣೆ ಕೊಡುತ್ತೀರಿ. ಮತ್ತೊಬ್ಬರಿಗೆ ಪರಿಹಾರ ಕೊಡುತ್ತೀರಿ. ಇನ್ನೊಬ್ಬರಿಗೆ ಪರಿಹಾರವೂ ಇಲ್ಲ, ಸಾಂತ್ವನವೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಒಂದಲ್ಲಾ ಒಂದು ವಿಷಯ ತಂದು ಸಂಸತ್ತಿನಲ್ಲಿ ಗದ್ದಲ ಮಾಡುತ್ತಿದೆ. ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಖರ್ಗೆ ಆರೋಪಿಸಿದರು.