ಮಸೀದಿ-ಆಸ್ಪತ್ರೆ ದೇಣಿಗೆಗೆ ತೆರಿಗೆ ವಿನಾಯಿತಿ

ಅಯೋಧ್ಯೆ, ಮೇ ೩೦- ಉದ್ದೇಶಿತ ಅಯೋದ್ಯೆ ಮಸೀದಿ- ಆಸ್ಪತ್ರೆ ಯೋಜನೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ವಿನಾಯಿತಿ ನೀಡುವಂತೆ ಕೋರಿ ಅಯೋಧ್ಯೆ ಮಸೀದಿ ಟ್ರಸ್ಟ್ (ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್- ಐಐಎಫ್‌ಸಿ) ಅರ್ಜಿ ಸಲ್ಲಿಸಿದ ಒಂಬತ್ತು ತಿಂಗಳ ಬಳಿಕ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಅನುಮತಿ ನೀಡಿದೆ.

ಇದೀಗ ಅಯೋಧ್ಯೆ ವಿವಾದ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಚನೆಯಾದ ಟ್ರಸ್ಟ್‌ಗೆ ನೀಡುವ ಎಲ್ಲ ದೇಣಿಗೆಗಳು ಆದಾಯ ತೆರಿಗೆ ಕಾಯ್ದೆ 80ಜಿ ಅಡಿಯಲ್ಲಿ ವಿನಾಯಿತಿ ಪಡೆಯಲು ಅರ್ಹವಾಗಿರುತ್ತವೆ. 2020ರ ಜುಲೈ 29ರಂದು ರಚನೆಯಾದ ಐಐಎಫ್‌ಸಿ, 2020ರ ಸೆಪ್ಟೆಂಬರ್ 1ರಂದು ವಿನಾಯ್ತಿಗೆ ಮನವಿ ಸಲ್ಲಿಸಿತ್ತು. “ಆದಾಯ ತೆರಿಗೆ ಇಲಾಖೆ ಎತ್ತಿದ್ದ ಎಲ್ಲ ಆಕ್ಷೇಪ ಮತ್ತು ಸಂದೇಹಗಳು ಮತ್ತು ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬ, ಮಸೀದಿ- ಆಸ್ಪತ್ರೆ ಸಂಕೀರ್ಣ ನಿರ್ಮಾಣದ ದೇಣಿಗೆ ವಿಳಂಬಕ್ಕೆ ಕಾರಣವಾಗಿದೆ. ವಿದೇಶಿ ದೇಣಿಗೆ ನಿಯಮಾವಳಿ ಕಾಯ್ದೆ (ಎಫ್‌ಸಿಆರ್‌ಎ) ಅನುಮತಿಯನ್ನೂ ನಿರಾಕರಿಸಿರುವುದರಿಂದ ವಿದೇಶಿ ದೇಣಿಗೆ ಪಡೆಯಲೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ ಅಡಿಯಲ್ಲಿ ವಿನಾಯ್ತಿ ಪಡೆದಿರುವುದು ಅಗತ್ಯ. ಇದುವರೆಗೆ 20 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿದ್ದು, ಸಮುದಾಯದಿಂದ ದೇಣಿಗೆ ಸ್ವೀಕರಿಸುವುದನ್ನು ಇನ್ನೂ ಆರಂಭಿಸಿಲ್ಲ. ಹಿತೈಷಿಗಳು ಸ್ವಯಂಪ್ರೇರಿತರಾಗಿ ದೇಣಿಗೆ ನೀಡಿದ್ದಾರೆ. ಇದೀಗ ಆದಾಯ ತೆರಿಗೆ ಇಲಾಖೆ ಅನುಮತಿ ಬಳಿಕ ಆಯ್ದ ವ್ಯಕ್ತಿಗಳಿಂದ ದೇಣಿಗೆ ಕೋರಲಿದ್ದೇವೆ ಹಾಗೂ ಎಫ್‌ಸಿಆರ್‌ಎ ಅನುಮೋದನೆಗೂ ಅರ್ಜಿ ಸಲ್ಲಿಸಲಿದ್ದೇವೆ” ಎಂದು ಟ್ರಸ್ಟ್ ಕಾರ್ಯದರ್ಶಿ ಅಖ್ತರ್ ಹುಸೇನ್ ಹೇಳಿದರು. “2021ರ ಜನವರಿ 21ರಂದು ನಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಫೆಬ್ರುವರಿ 3ರಂದು ನಾವು ಮತ್ತೆ ಅರ್ಜಿ ಸಲ್ಲಿಸಿ ಮಾರ್ಚ್ 10ರಂದು ಎಲ್ಲ ಆಕ್ಷೇಪಗಳಿಗೆ ಉತ್ತರಿಸಿದ್ದೇವೆ” ಎಂದು ಅಧ್ಯಕ್ಷ ಝಾಫರ್ ಫರೂಕಿ ಹೇಳಿದ್ದಾರೆ.