ಮಸೀದಿಗೆ ನುಗ್ಗಿ ಕಳವು ಮುಂಜಾನೆ ಪ್ರಕರಣ ಬೆಳಕಿಗೆ: ಸಿಸಿ ಕ್ಯಾಮೆರಾದಲ್ಲಿ ಸೆರೆ


ಕೊಣಾಜೆ, ನ.೨- ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮಾ ಮಸೀದಿಗೆ ನುಗ್ಗಿ ಕಳವುಗೈದ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ. ಕಳವು ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಸೀದಿಯ ಪಕ್ಕದ ಕೋಣೆಯೊಂದರಲ್ಲಿದ್ದ ಪಿಕ್ಕಾಸು ಅನ್ನು ಬಳಸಿ ಆವರಣ ಗೋಡೆಯಲ್ಲಿದ್ದ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ಕಳವುಗೈಯಲಾಗಿದೆ. ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಓರ್ವ ವ್ಯಕ್ತಿಯ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆರಂಭದಲ್ಲಿ ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದ ಕಳ್ಳ, ಬಳಿಕ ಹಾರೆಯ ಸಹಾಯದಿಂದ ಮಸೀದಿಯ ಬಾಗಿಲಿನ ಚಿಲಕವನ್ನು ತೆಗೆದು ಒಳಗೆ ನುಗ್ಗಿದ್ದಾನೆ. ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾನೆ. ಮಸೀದಿ ಕಚೇರಿಯ ಬಾಗಿಲನ್ನೂ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶಾಸಕ ಯು.ಟಿ ಖಾದರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕಳವು ಕೃತ್ಯ ನಡೆಸಲು ಮಸೀದಿಯ ಪಿಕ್ಕಾಸ್ ಬಳಕೆ, ಎಲ್ಲಾ ಕಾಣಿಕೆ ಡಬ್ಬಿಗಳನ್ನು ಸ್ಪಷ್ಟವಾಗಿ ತಿಳಿದು ಕಳವುಗೈದಿರುವುದನ್ನು ಗಮನಿಸಿದರೆ ಮಾಹಿತಿ ಇರುವ ವ್ಯಕ್ತಿಯೇ ಕಳ್ಳತನ ನಡೆಸಿರುವ ಶಂಕೆಯಿದೆ.
ಶಫೀಕ್, ಮಸೀದಿ ಕಾರ್ಯದರ್ಶಿ