ಮಸಿದಾಪುರ: ದಲಿತ ಕೇರಿ ಸ್ಥಳಾಂತರಿಸಿ ಅಹೋರಾತ್ರಿ ಧರಣಿ

ದೇವದುರ್ಗ.13 ಮಳೆ ಹಾಗೂ ಬಸಿನೀರಿನ ಸಮಸ್ಯೆಯಿಂದ ಬಳಲುತ್ತಿರುವ ತಾಲೂಕಿನ ಮಸಿದಾಪುರ ಗ್ರಾಮದ ದಲಿತರ ಕೇರಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಗಬ್ಬೂರಿನ ನಾಡಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಂದು ಅಹೋರಾತ್ರಿ ಧರಣಿ ಆರಂಭಿಸಿದೆ.
ಮಸಿದಾಪುರ ಅರ್ಧಗ್ರಾಮ ಮಳೆ, ಬಸಿನೀರಿನಿಂದ ಹಾಳಾಗಿದ್ದು, ಬಹುತೇಕ ದಲಿತ ಕೇರಿ ಈ ಸಮಸ್ಯೆಯಿಂದ ನರಳುತ್ತಿದೆ. ಹಲವು ವರ್ಷಗಳಿಂದ ಈ ಸಮಸ್ಯೆಯಿದ್ದು ಏರಿಯಾ ನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಹಿರಿಯರು ಮಾಡಿದ ಅಗೇವು ಇದ್ದು, ಎಲ್ಲೆಂದರಲ್ಲಿ ಕುಸಿಯುತ್ತಿವೆ. ೨೦೦೯ರಲ್ಲಿ ನೆರೆಹಾವಳಿ ಬಂದಾಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಇದರಿಂದ ದಲಿತ ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಸ್ಥಳಾಂತರ ಮಾಡಲು ಗ್ರಾಮದ ಸರ್ವೇ ನಂ.೩ರ ೧೪.೨೩ಎಕರೆಯಲ್ಲಿ ೨ಎಕರೆ ಆಶ್ರಯ ಕಾಲನಿಗೆ ಮೀಸಲಿಡಲಾಗಿದೆ. ಆದರೂ ಗ್ರಾಮ ಸ್ಥಳಾಂತರ ಮಾಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಕೂಡಲೇ ದಲಿತ ಕೇರಿಯನ್ನು ೨ಎಕರೆ ಜಾಗಕ್ಕೆ ಸ್ಥಳಾಂತರ ಮಾಡಿ ಎಲ್ಲರಿಗೂ ನಿವೇಶನ ಸಹಿತ ಮನೆ ನಿರ್ಮಿಸಿಕೊಡಬೇಕು. ಇಲ್ಲವೆ ಅವರಿಗೆ ದಯಮರಣಕ್ಕೆ ಅನುಮತಿ ನೀಡಬೇಕು. ಸೂಕ್ತ ಭರವಸೆ ನೀಡುವವರಿಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ, ಮುಖಂಡರಾದ ರಾಜಪ್ಪ ಸಿರವಾಕರ್, ಮರೆಪ್ಪ ಮಲದಕಲ್, ನರಸಪ್ಪ, ತುಕಾರಾಮ್, ಗ್ರಾಮಸ್ಥರಾದ ಬೂದೆಪ್ಪ ಮಸಿದಾಪುರ, ಅಯ್ಯಪ್ಪ, ಚಂದ್ರಪ್ಪ, ಬೂದೆಮ್ಮ, ರಾಚಮ್ಮ, ಗಂಗಮ್ಮ, ನೀಲಮ್ಮ, ಲಕ್ಷ್ಮಿ, ಸರೋಜಮ್ಮ, ಮಹಾದೇವಮ್ಮ, ಮುತ್ತಮ್ಮ, ರಾಮಕೃಷ್ಣ, ಮಹೇಶ ಇತರರಿದ್ದರು.