ಮಸಣ ಕಾರ್ಮಿಕರ ಸ್ಥಿತಿ ಶೋಚನೀಯ


ಸಂಜೆವಾಣಿ ವಾರ್ತೆ
ಸಂಡೂರು :ಜೂ:16 ಮಸಣಕಾರ್ಮಿಕರ  ಬೇಡಿಕೆ ಈಡೇರಿಕೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರಕುತ್ತಿಲ್ಲ. ಸರ್ಕಾರ ಎಲ್ಲಾ ಮಸಣಗಳಲ್ಲಿ ಪಾರಂಪಾರಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರ ಕುಟುಂಬಗಳ ಸದಸ್ಯರುಗಳ ಗಣತಿ ಮಾಡಬೇಕು. ಅವರಿಗೆ ಪುನರ್ ವಸತಿ ಕಲ್ಪಿಸಬೇಕು. ಇಂದಿಗೂ ಮಸಣ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಪ್ರತಿ ಕುಣಿ ಅಗಿಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗವೆಂದು ಪರಿಗಣಿಸಿ ಕುಣಿ ಅಗೆಯುವ ಮುನ್ನ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 3 ಸಾವಿರ ರೂ. ಕೂಲಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಮಸಣ ಕಾರ್ಮಿಕರಿಗೆ ಅಗತ್ಯ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ಒದಗಿಸಬೇಕು. 45 ವರ್ಷ ಮೇಲ್ಪಟ್ಟ ಎಲ್ಲಾ ಮಸಣ ಕಾರ್ಮಿಕರಿಗೆ ಮಾಸಿಕ ಧನ ಅಥವಾ ಪಿಂಚಣಿಯನ್ನ ನೀಡುವುದು ಜೊತೆಗೆ ಕಾರ್ಮಿಕರ ಭವಿಷ್ಯ ನಿಧಿಯನ್ನು ಜಾರಿಗೊಳಿಸಬೇಕು ಎಂದು ಮಸಣ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಎ. ಸ್ವಾಮಿಯವರು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಿದ ನಂತರ ಮಾತನಾಡಿದರು. ಅವರು ಮುಂದುವರೆದು ಮಸಣ ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕನಿಷ್ಟ ಪಕ್ಷ 200 ದಿನಗಳ ಉದ್ಯೋಗ ಒದಗಿಸಬೇಕು ಎಂದರು   ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಚ್. ದುರುಗಮ್ಮ ಸದಸ್ಯರಾದ ಶಿವಮೂರ್ತಿ ಹುಲುಗಪ್ಪ ನಾಗರಾಜ ಭೊಜನಾಯಕ ಪೂರಿ ನಾಯ್ಕ ಪರಶುರಾಮ ಹೂಲೆಪ್ಪ ಕುಮಾರಸ್ವಾಮಿ ಉಪಸ್ಥಿತರಿದ್ದರು.

One attachment • Scanned by Gmail