ಮಸಣ ಕಾರ್ಮಿಕರ ಗಣತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಬಳ್ಳಾರಿ ನ 09 : ಜಿಲ್ಲೆಯ ಮಸಣ ಕಾರ್ಮಿಕರ ಗಣತಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಇಂದು ನಗರದ ಹೆಚ್.ಆರ್.ಜಿ ವೃತ್ತದಿಂದ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಸಣ ಕಾರ್ಮಿಕರು ಜಿ.ಪಂ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಮಸಣ ಕಾರ್ಮಿಕರು ಹಲವು ವರ್ಷಗಳಿಂದ ರಾಜ್ಯದಾದ್ಯಂತ ನಡೆಸಿದ ಹೋರಾಟದ ಫಲವಾಗಿ ಸಮಾಜ ಕಲ್ಯಾಣ ಇಲಾಖೆ ಗಣತಿಗೆ ಆದೇಶಿಸಿತ್ತು. ಆದರೆ, ಬಹುತೇಕ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ನಗರಸಭೆ ಮತ್ತು ಪುರಸಭೆಗಳು ತಮ್ಮ ವ್ಯಾಪ್ತಿಯಲ್ಲಿ ಮಸಣ ಕಾರ್ಮಿಕರು ಇಲ್ಲವೆಂಬ ಸುಳ್ಳು ಮಾಹಿತಿ‌‌ ನೀಡಿದ್ದಾರೆ. ಹಾಗಾಗಿ ಮಸಣ ಕಾರ್ಮಿಕರು ಇರುವುದನ್ನು ತೋರಿಸಲು ಧರಣಿ ಹಮ್ಮಿಕೊಳ್ಳಲಾಗುತ್ತಿದೆಂದರು.
ಮಸಣ ಕಾರ್ಮಿಕರು ಬಿಟ್ಟಿ ಚಾಕರಿ ಮಾಡುತ್ತಿದ್ದಾರೆ. ಗ್ರಾಮಕ್ಕೆ ಸಂಬಂಧ ಪಟ್ಟ ಕೆಲಸ ಆಗಿದ್ದರೂ ಸ್ಥಳಿಯ ಸಂಸ್ಥೆಗಳು ಅವರನ್ನು ಗುರುತಿಸುವ ಕೆಲಸ ಮಾಡುತ್ತಿಲ್ಲ. ಬಹಳಷ್ಟು ದಲಿತರೇ ಈ ಕೆಲಸ ಮಾಡುತ್ತಿದ್ದಾರೆ‌. ಯಾವುದೇ ಸ್ಥಳಿಯ ಸಂಸ್ಥೆಗಳು ಮಸಣ ನಿರ್ವಹಣೆ ಮಾಡುತ್ತಿಲ್ಲ. ಬಿಟ್ಟಿ ಚಾಕರಿ ನಿಲ್ಲಿಸಿ, ಕೆಲಸ ವೇತನ ಮತ್ತು ರಕ್ಷಣಾ ಪರಿಕರಗಳನ್ನು‌ ನೀಡಬೇಕು. ಮಸಣಗಳ ನಿರ್ವಹಣೆಯನ್ನು ಸ್ಥಳಿಯ ಸಂಸ್ಥೆಗೆ ವಹಿಸಬೇಕು ಎಂದು ಆಗ್ರಹಿಸಲಾಯಿತು.
ಪ್ರತಿ ಮಸಣಕ್ಕೆ ಮಸಣ ನಿರ್ವಾಹಕರ ನೇಮಕ, ಕುಣಿ ಅಗೆಯುವ ಕೆಲಸಕ್ಕೆ ಖಾತ್ರಿಯಡಿ ಪರಿಗಣಿಸಬೇಕು. ಶವ ಸಾಗಿಸಲು ವಾಹನ, ಪರಿಕರಗಳು, ಮಸಣಗಳ ನಿರ್ವಹಣೆ, ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ, ಕಾರ್ಮಿಕರ ವಿಶೇಷ ಆರೋಗ್ಯ ಕಾರ್ಡ್, ಖಾತ್ರಿಯಡಿ ಕನಿಷ್ಠ 200 ದಿನಗಳ ಕಾಲ ಉದ್ಯೋಗ ಒದಗಿಸಬೇಕು. 5 ಲಕ್ಷ ರೂ.ಮೌಲ್ಯದ ಉಚಿತ ಮನೆ, ಐದು ಎಕರೆ ಜಮೀನು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ನಿರುದ್ಯೋಗಿಗಳಿಗೆ 20 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು. ಎಲ್ಲಾ ಗ್ರಾಮಗಳಲ್ಲಿ ದಲಿತರ ಮಸಣಕ್ಕೆ ಸ್ಥಳ ಒದಗಿಸಬೇಕೆಂಬ ಆಗ್ರಹಿಸಲಾಯಿತು.
ಸಂಘದ ಎ.ಸ್ವಾಮಿ, ಮಾಳಮ್ಮ, ಪೆನ್ನಪ್ಪ ಮೊದಲಾದವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.