ಮಸಣ ಕಾರ್ಮಿಕರಿಗೆ ಪಟ್ಟಾನೀಡಲು ಆಗ್ರಹ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 20: ಸಂಡೂರು: ತಾಲೂಕಿನ 26 ಗ್ರಾಮ ಪಂಚಾಯಿತಿ ಹಾಗೂ 2 ಪುರಸಭೆಗಳಲ್ಲಿ ರುದ್ರಭೂಮಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಸೂಕ್ತ ಸರ್ವೇ ಮಾಡಿ ಅವರಿಗೆ ಕೃಷಿ ಮಾಡಲು ಸರ್ಕಾರಿ ಭೂಮಿಗಳಿದ್ದು ಅವುಗಳಲ್ಲಿ ಪಟ್ಟಾ ನೀಡುವ ಮೂಲಕ ಅವರನ್ನು ರಕ್ಷಿಸಬೇಕು ಎಂದು ಜಿಲ್ಲಾ ಮುಖಂಡ ಎ.ಸ್ವಾಮಿ ಒತ್ತಾಯಿಸಿದರು.
ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮಸಣ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ತಾಲೂಕು ಮಸಣ ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡ ಎ.ಸ್ವಾಮಿ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಸಣ ಕಾರ್ಮಿಕರ ಹಾಗೂ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಾಹಿತಿ ಕೇಳಿ ಅದೇಶ ಹೊರಡಿಸಿದೆ, ಅಲ್ಲದೆ ಗ್ರಾಮ ಪಂಚಾಯಿತಿ ಮೂಲಕ ಮಾಹಿತಿ ಪಡೆಯಲು ಮುಂದಾಗಿದ್ದು ಉತ್ತಮ ಬೆಳವಣಿಗೆಯೇ ಸರಿ, ಸಂಡೂರು ತಾಲೂಕಿನ 26 ಗ್ರಾಮ ಪಂಚಾಯಿತಿಗಳು ಮತ್ತು 2 ಪುರಸಭೆಯ ರುದ್ರಭೂಮಿಗಳಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ, ಇದುವರೆಗೂ ಇವರಿಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಪುರಸಭೆಗಳು ಮಾಹಿತಿ ನೀಡಿರುವುದಿಲ್ಲ, ಅಲ್ಲದೆ ಮಸಣ ಕಾರ್ಮಿಕರು ಇಲ್ಲವೆಂದು ತೋರಿಸಿದ್ದಾರೆ, ಇದರಿಂದ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದು ತಕ್ಷಣ ಎಲ್ಲಾ ಪಂಚಾಯಿತಿ ಮತ್ತು ಪುರಸಭೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಣ ಕಾರ್ಮಿಕರನ್ನು ಪಂಚಾಯಿತಿ ವ್ಯಾಪ್ತಿಗೆ ಸೇರಿಸಿಕೊಂಡು ಸರ್ಕಾರಕ್ಕೆ ಮಾಹಿತಿ ನೀಡಬೇಕು, ಅಲ್ಲದೆ ಈಗಾಗಲೇ ಹಳ್ಳಿಗಳಲ್ಲಿ ಸರ್ಕಾರಿ, ಇತರ ಜಮೀನುಗಳಲ್ಲಿ ಕೃಷಿ ನಿರ್ವಹಿಸುತ್ತಿದ್ದು ಅವರಿಗೆ ಪಟ್ಟಾ ಕೊಡುವಂತಹ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿಗಳಿಗೆ ಮುಖಂಡರಾದ ಎ. ಸ್ವಾಮಿ ನೇತೃತ್ವದಲ್ಲಿ ಹೆಚ್. ನಾಗೇಶ್, ಹೆಚ್.ಕುಮಾರಸ್ವಾಮಿ, ಕರಾಳಪ್ಪ, ಪರುಷಪ್ಪ ಇತರರು ಮನವಿ ಪತ್ರ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.