ಮಳೆ ಹಿನ್ನಲೆ: ಈದ್ಗಾ ಬದಲು ಆಯಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಕೆ

ಬೀದರ್: ಜು.11:ಕಳೆದ ವರ್ಷ ಕೋವಿಡ್ ಕಾರಣ ಈದ್ ಉಲ್ ಅದಾ (ಬಕ್ರೀದ್) ದಿನ ಜಿಲ್ಲಾಡಳಿತ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಆದರೆ, ಈ ವರ್ಷ ಜಿಟಿ ಜಿಟಿ ಮಳೆಯೇ ಹಬ್ಬದ ಆಚರಣೆಗೆ ತೊಡಕು ಉಂಟು ಮಾಡಿತು. ಮುಸ್ಲಿಮರು ಭಾನುವಾರ ಈದ್ಗಾ ಮೈದಾನದ ಬದಲು ಆಯಾ ಮಸೀದಿಗಳಲ್ಲೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಗರದಲ್ಲಿರುವ ನೂರಕ್ಕೂ ಅಧಿಕ ಮಸೀದಿಗಳಲ್ಲಿ ನಿತ್ಯ ಪ್ರಾರ್ಥನೆ ಸಲ್ಲಿಸುವ ಪೇಷ್‍ಮಾನ್ ಅವರೇ ಧರ್ಮ ಬೋಧನೆ ಮಾಡಿದರು. ಮಳೆಯ ಕಾರಣ ಈದ್ ಉಲ್ ಅದಾ (ಬಕ್ರೀದ್) ಸರಳ ಆಚರಣೆ ಮಾಡಿದರು.

ಪ್ರತಿ ವರ್ಷ ಕೇಂದ್ರ ಬಸ್ ನಿಲ್ದಾಣ ಸಮೀಪ ಹಾಗೂ ಚಿದ್ರಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಎರಡು ವರ್ಷ ಇಲ್ಲಿ ಕೋವಿಡ್ ಕಾರಣ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಓಲ್ಡ್‍ಸಿಟಿಯ ಜಾಮಿಯಾ ಮಸೀದಿ, ಮೆಹಮೂದ್ ಗವಾನ್ ವೃತ್ತ ಬಳಿ ಮಸೀದಿ, ಸಿದ್ಧಿತಾಲೀಂ ಬಳಿಯ ಮಸೀದಿ, ಡಾ.ಅಂಬೇಡ್ಕರ್ ವೃತ್ತ ಸಮೀಪದ ಮಸೀದಿ, ಚಿದ್ರಿಯ ಮಸೀದಿಗಳಲ್ಲೇ ಹೆಚ್ಚು ಜನ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಮರು ತಂಡಗಳಲ್ಲಿ ಬಂದು ಪ್ರಾರ್ಥನೆ ಮಾಡಿದರು. ಮಸೀದಿಗಳಲ್ಲಿ ಧರ್ಮಗುರುಗಳು ಒಂದೇ ಬಾರಿ ಉಪದೇಶ ನೀಡಬೇಕು ಎನ್ನುವ ಸಂಪ್ರದಾಯ ಇದೆ. ಹೀಗಾಗಿ ಆಯಾ ಮಸೀದಿಗಳಲ್ಲಿ ಪೇಷ್‍ಮಾಮ್ ಹಾಗೂ ಮದರಸಾಗಳಲ್ಲಿನ ವಿದ್ಯಾರ್ಥಿಗಳು ಹಬ್ಬದ ಸಂದೇಶ ನೀಡಿದರು.

ಮುಸ್ಲಿಮರು ಬೆಳಿಗ್ಗೆಯಿಂದ ಉಪವಾಸ ಇದ್ದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಆಪ್ತರು ಹಾಗೂ ಬಂಧು ಮಿತ್ರರಿಗೆ ಪರಸ್ಪರ ಶುಭ ಕೋರಿದರು. ನಗರದ ಎಲ್ಲ ಮಸೀದಿಗಳಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.