ಮಳೆ ಹಾನಿ ಸಿಎಂ ಜತೆ ಮೋದಿ, ಶಾ ಚರ್ಚೆ

ಬೆಂಗಳೂರು, ನ.೨೩- ರಾಜ್ಯದಲ್ಲಿ ಎಡೆಬಿಡದೆ ಕೆಲ ದಿನಗಳಿಂದ ಸುರಿದ ಭಾರಿ ಮಳೆಯ ಬಗ್ಗೆ ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿ ಮಳೆ ಅನಾಹುತಗಳ ಮಾಹಿತಿ ಪಡೆದುಕೊಂಡು ರಾಜ್ಯಕ್ಕೆ ನೆರವು ನೀಡುವ ಅಭಯ ನೀಡಿದ್ದಾರೆ.
ರಾಜ್ಯದಲ್ಲಿನ ಮಳೆ ಅನಾಹುತದ ಬಗ್ಗೆ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರವರು ತಮಗೆ ಕರೆ ಮಾಡಿ ಎಲ್ಲ ವಿವರಗಳನ್ನು ಪಡೆದುಕೊಂಡು ಕೇಂದ್ರದಿಂದ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಳೆಹಾನಿ ಪ್ರದೇಶಗಳ ಭೇಟಿಗೆ ತೆರಳುವ ಮುನ್ನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ದೂರವಾಣಿ ಕರೆ ಮಾಡಿ ರಾಜ್ಯದ ಮಳೆ ಸ್ಥಿತಿಗತಿ, ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ ಆಗಿರುವ ಬೆಳೆ ನಷ್ಟ, ಸಾವು-ನೋವುಗಳ ಮಾಹಿತಿ ಪಡೆದುಕೊಂಡರು ಎಂದರು. ಅದರಲ್ಲೂ ಬೆಂಗಳೂರಿನ ಪರಿಸ್ಥಿತಿಯ ಬಗ್ಗೆ ವಿಶೇಷವಾಗಿ ಕೇಳಿದರು ಎಂದು ಮುಖ್ಯಮಂತ್ರಿಗಳು ಹೇಳಿದರು.
ಮಳೆಯಿಂದ ತೊಂದರೆಗೆ ಸಿಲುಕಿರುವ ರಾಜ್ಯಕ್ಕೆ ಏನೆಲ್ಲ ನೆರವು ಬೇಕೋ ಅದನ್ನೆಲ್ಲ ಒದಗಿಸುವ ಭರವಸೆಯನ್ನು ನೀಡಿದರು ಎಂದು ಅವರು ತಿಳಿಸಿದರು.
ಪ್ರಧಾನಿಗಳು ದೂರವಾಣಿ ಮಾಡಿದ ಬೆನ್ನಲ್ಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ದೂರವಾಣಿ ಕರೆ ಮಾಡಿ ಮಳೆ ಹಾನಿಯ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಅಗತ್ಯ ನೆರವು ನೀಡುವ ಭರವಸೆ ನೀಡಿದರು ಎಂದರು.
ರಾಜ್ಯಕ್ಕೆ ಅಗತ್ಯವಿರುವ ನೆರವಿನ ಬಗ್ಗೆ ಸದ್ಯಕ್ಕೆ ಕೇಂದ್ರಕ್ಕೆ ಯಾವುದೇ ಪ್ರಸ್ತಾವವನ್ನು ರಾಜ್ಯಸರ್ಕಾರ ಸಲ್ಲಿಸಿಲ್ಲ. ನಷ್ಟದ ಅಂದಾಜನ್ನು ಪೂರ್ಣ ಪ್ರಮಾಣದಲ್ಲಿ ನಡೆಸಿದ ನಂತರ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಪರಿಹಾರದ ಬೇಡಿಕೆ ಇರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಇಂದೂ ಸಹ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದರು.