ಮಳೆ ಹಾನಿ ವಿಶೇಷ ಅನುದಾನಕ್ಕೆ ಕೇಂದ್ರಕ್ಕೆ ಮನವಿ : ಸಿಎಂ

ರಾಜ್ಯದಲ್ಲಿ ಸುರಿದ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಅಧ್ಯಯನ ನಡೆಸಲು ಆಗಮಿಸಿರುವ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶಿಶ್‌ಕುಮಾರ್ ನೇತೃತ್ವದ ತಂಡದೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚೆ ನಡೆಸಿದರು.

ಬೆಂಗಳೂರು,ಸೆ.೭- ರಾಜ್ಯದಲ್ಲಿ ಭಾರಿ ಮಳೆಯಿಂದ ಅತಿವೃಷ್ಠಿಯಾಗಿ ಹೆಚ್ಚಿನ ನಷ್ಟವಾಗಿದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವಿಶೇಷ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಅಧ್ಯಯನ ತಂಡದ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರವು ಅತ್ಯಂತ ನಿಖರವಾಗಿ ಹಾಗೂ ಪಾರದರ್ಶಕವಾಗಿ ಹಾನಿಯ ಅಂದಾಜು ಪಟ್ಟಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನ್ಯಾಯಯುತ ಪರಿಹಾರ ಒದಗಿಸಲು ಶಿಫಾರಸ್ಸು ಮಾಡಿ ಎಂದು ಹೇಳಿದ್ದೇನೆ ಎಂದರು.
ರಾಜ್ಯದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಿಂದಾಗಿ ಆಗಿರುವ ಹಾನಿ ಹಾಗೂ ರಾಜ್ಯಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ತಂದು ಎಲ್ಲ ಮಾಹಿತಿಯನ್ನು ನೀಡಿರುವುದಾಗಿ ತಿಳಿಸಿದರು.
ಮಳೆಯಿಂದ ಬೆಂಗಳೂರು ಸೇರಿದಂತೆ ಮಲೆನಾಡು ಕರಾವಳಿ ಜಿಲ್ಲೆಗಳು ಹಾಗೂ ಯಾವ ಯಾವ ಜಿಲ್ಲೆಗಳಲ್ಲಿ ಯಾವ ರೀತಿ ಹಾನಿಯಾಗಿದೆ. ಎಷ್ಟು ಮನೆಗಳು ಕುಸಿದಿದೆ. ಎಷ್ಟು ಪ್ರಾಣ ಹಾನಿಯಾಗಿದೆ. ಎಷ್ಟು ಜಾನುವಾರು ಸತ್ತಿದೆ. ಮೂಲ ಸೌಕರ್ಯಗಳಿಗೆ ಆಗಿರುವ ಹಾನಿ ಇವೆಲ್ಲದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ. ಅವರುಗಳು ೪ ತಂಡಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಬರುತ್ತಾರೆ. ನಂತರ ಮತ್ತೊಮ್ಮೆ ಸಭೆ ನಡೆಸಿ ಮನವಿಯನ್ನು ಕೊಡುತ್ತೇವೆ. ಕಳೆದ ವಾರವೇ ಒಂದು ಪ್ರಸ್ತಾವನೆ ಕಳುಹಿಸಿದ್ದೆವು. ಮತ್ತೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಭೂ ಕುಸಿತದಿಂದ ಆಗಿರುವ ಹಾನಿಗೂ ಪರಿಹಾರ ನೀಡಬೇಕು. ಹಾಗೆಯೇ ಮೀನುಗಾರರ ದೋಣಿಗಳಿಗೆ ಆಗಿರುವ ಹಾನಿ ಜತೆಗೆ ನಗರ ಪ್ರದೇಶಗಳಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಆಗಿರುವ ಹಾನಿಗೆ ಪರಿಹಾರ ನೀಡಲು ಹೇಳಿದ್ದೇನೆ. ಪ್ರಸ್ತುತ ಇವುಗಳಿಗೆ ಪರಿಹಾರ ನೀಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ, ಇದನ್ನು ಅಳವಡಿಸಿಕೊಳ್ಳಿ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ಸೂಚಿಸಿರುವುದಾಗಿ ಹೇಳಿದರು.