ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ: ಭೀಮಸಂದ್ರ ಕೆರೆ ಪರಿಶೀಲನೆ

ತುಮಕೂರು, ಆ. ೪- ಭೀಮಸಂದ್ರ ಅಮಾನಿಕೆರೆಯ ಏರಿ ಬಿರುಕು ಬಿಡುವ ಸಂಭವವಿದೆ ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಕೆರೆ ಏರಿಗೆ ಯಾವುದೇ ತೊಂದರೆ ಉಂಟಾಗಿಲ್ಲದಿರುವುದು ಗಮನಕ್ಕೆ ಬಂದಿದೆ. ಭೀಮಸಂದ್ರ ಕೆರೆ ಒಳಹರಿವು ಹೆಚ್ಚಾಗಿದ್ದು, ಕೆರೆ ಕೋಡಿ ಬಿದ್ದಿದೆ. ಸರಿ ಸುಮಾರು ೬೦೦ ಕ್ಯೂಸೆಕ್ಸ್‌ನಷ್ಟು ನೀರು ಹೊರ ಹರಿದಿದ್ದು, ಯಾರು ಸಹ ಅತಂಕ ಪಡುವ ಅಗತ್ಯವಿಲ್ಲ. ಕೆರೆಯ ಕೋಡಿ ಬಾಯಿಯ ಸುತ್ತ ಬೆಳೆದಿರುವ ಗಿಡಗೆಂಟೆಗಳನ್ನು ಸ್ವಚ್ಛ ಮಾಡಲು ಹಾಗೂ ನಿರಂತರವಾಗಿ ಅಧಿಕಾರಿಗಳು ಕೆರೆ ಏರಿಯ ಸ್ಥಿತಿಯನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಗಾರೆನರಸಯ್ಯನ ಕಟ್ಟೆಯ ರಾಜಗಾಲುವೆ ಪಕ್ಕ ಮುಖ್ಯರಸ್ತೆಯು ಭಾರೀ ಮಳೆಯಿಂದಾಗಿ ಕುಸಿದಿದ್ದು, ಸರಿ ಸುಮಾರು ೧೫ ಅಡಿಗಳಷ್ಟು ಕುಸಿತವಾಗಿದೆ. ವಿಷಯ ತಿಳಿದ ತಕ್ಷಣ ಶಾಸಕರು ಪಾಲಿಕೆ ಸದಸ್ಯರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮಹಾನಗರಪಾಲಿಕೆ ಆಯುಕ್ತರಿಗೆ ಮರಳು ಮೂಟೆಯನ್ನು ಹಳ್ಳಕ್ಕೆ ತುಂಬಿಸಿ ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಾರೆನರಸಯ್ಯನ ಕಟ್ಟೆಯು ಕೋಡಿಯಾಗಲು ೭ ರಿಂದ ೮ ಅಡಿಗಳಷ್ಟು ಬಾಕಿ ಇದ್ದು, ಕೋಡಿಯ ಜಾಗಕ್ಕೆ ಶಾಸಕರು ಪಾಲಿಕೆ ಸದಸ್ಯರೊಂದಿಗೆ ಭೇಟಿ ನೀಡಿ ಕೆರೆಯ ಸ್ಥಿಗತಿಯನ್ನು ಅವಲೋಕಿಸಿದರು.
ಕೋಡಿಯಾದ ನಂತರ ನೀರಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೋಡಿಯ ಕಾಲುವೆಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಮರಳೂರು ಕೆರೆ ಸೇರಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯಿಂದಾಗಿ ಆಟೋ ಚಾಲಕ ಅನ್ಸರ್ ಅಹಮದ್ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಮತ್ತೊಮ್ಮೆ ಇಂತಹ ಅವಘಡಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಪಿ.ಹೆಚ್.ಕಾಲೋನಿಯ ೭ನೇ ಕ್ರಾಸ್‌ನ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದ ಬಳಿ ಭಾರೀ ಮಳೆಯಿಂದಾಗಿ ಮನೆಯು ಸಂಪೂರ್ಣ ಕುಸಿತಗೊಂಡಿದ್ದು, ಇಲ್ಲಿಗೆ ಶಾಸಕರು ಭೇಟಿ ನೀಡಿ, ಸ್ಥಳೀಯ ಕಂದಾಯಾಧಿಕಾರಿಗಳಿಗೆ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಶೀಘ್ರವಾಗಿ ಪರಿಹಾರ ಧನವನ್ನು ನೀಡುವಂತೆ ಸೂಚನೆ ನೀಡಿದರು.
೧೪೫೦ ನಿರ್ಮಾಣವಾಗುತ್ತಿರುವ ಯೋಜನೆಯಲ್ಲಿ ಮನೆ ಕಟ್ಟಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.