ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ

ಕೆ.ಆರ್.ಪೇಟೆ.ನ.30: ಮಳೆಯಿಂದಾಗಿ ಪದೇ ಪದೇ ಪ್ರವಾಹ ಪೀಡಿತವಾಗುತ್ತಿದ್ದ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸಿ.ಅಶ್ವಥಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮತ್ತು ಪುರಸಭಾ ನಿಯಂತ್ರಣದ ಖಾಸಗಿ ಬಸ್ ನಿಲ್ದಾಣಗಳನ್ನು ಚನ್ನಪ್ಪನ ಕಟ್ಟೆ ಎನ್ನುವ ಪುಟ್ಟ ಕೆರೆಯೊಂದನ್ನು ಮುಚ್ಚಿ ನಿರ್ಮಿಸಲಾಗಿದೆ. ಪಟ್ಟಣ ಬೆಳೆದಂತೆ ಚನ್ನಪ್ಪನ ಕಟ್ಟೆಗೆ ಮೇಲ್ಬಾಗದಿಂದ ಹರಿದು ಬರುತ್ತಿದ್ದ ಮಳೆಯ ನೀರು ಸುಲಲಿತವಾಗಿ ಹರಿದು ಹೋಗಲು ಅಡಚಣೆಯಾಗಿದೆ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ವೈಜ್ಞಾನಿಕವಾಗಿ ನಿರ್ಮಿಸದೆ ಕೆರೆಯೊಳಗೆ ನಿರ್ಮಿಸಿದ ಪರಿಣಾಮ ಮಳೆ ಬಂದರೆ ಸಾಕು ಬಸ್ ನಿಲ್ದಾಣ ತುಂಬಿಕೊಂಡು ಕೆರೆಯಾಗುತ್ತದೆ. ನೀರುತುಂಬಿದ ಪರಿಣಾಮ ಇತ್ತೀಚೆಗೆ ಬಸ್ ನಿಲ್ದಾಣದೊಳಗೆ ನಿಂತಿದ್ದ ಪ್ರಯಾಣಿಕರನ್ನು ಬೋಟ್ ಮೂಲಕ ಅಗ್ನಿಶಾಮ ಸಿಬ್ಬಂದಿ ಹೊರಗೆ ತಂದು ರಕ್ಷಿಸಿದ್ದರು. ಬಸ್ ನಿಲ್ದಾಣದ ಮೇಲ್ಬಾಗದಿಂದ ಹಿಡಿದು ಕೆಳ ಭಾಗದ ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ದೊಡ್ಡ ಕೆರೆಗೆ ಸೇರಬೇಕಾದ ಮಳೆಯ ನೀರು ಸುಲಲಿತವಾಗಿ ಸಾಗಲು ರಾಜ ಕಾಲುವೆ ನಿರ್ಮಿಸದ ಪರಿಣಾಮ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲ ವಾಣಿಜ್ಯ ಪ್ರದೇಶದಲ್ಲಿ ನೀರು ತುಂಬಿ ವರ್ತಕರು ಸಾಕಷ್ಟು ಹಾನಿ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಹಸೀಲ್ದಾರರು, ಪುರಸಭೆ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ಕಾರ್ಯಪಡೆ ರಚಿಸಿ ಮಳೆಯ ನೀರು ಸುಲಲಿತವಾಗಿ ಹರಿದು ಹೋಗಲು ಕೈಗೊಳ್ಳಬಹುದಾದ ಕಾರ್ಯಯೋಜನೆಯೊಂದನ್ನು ಸಿದ್ದಪಡಿಸಿದ್ದರು.
ಮಳೆ ಬಂದಾಗ ಉಂಟಾಗುವ ಅನಾಹುತಗಳ ಹಿನ್ನೆಲೆಯಲ್ಲಿ ಕಾರ್ಯ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಸಿ.ಅಶ್ವಥಿ ಇಂದು ಪಟ್ಟಣಕ್ಕೆ ಬೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದರು. ಚನ್ನರಾಯಪಟ್ಟಣ ರಸ್ತೆಯ ಅಂಬಾರಿ ಹೋಟೆಲ್ ಬಳಿ ಹರಿದು ಬರುವ ಹಳ್ಳದ ನೀರು, ಹಳೇ ಬಸ್ ನಿಲ್ದಾಣ, ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಂ.ಡಿ.ಸಿ.ಸಿ ಬ್ಯಾಂಕ್ ಹಿಂಭಾಗದ ನೀರು ಹರಿದು ಹೋಗುವ ಹಳ್ಳ, ಪುರಸಭೆಯ ಮೀನಿನ ಮಾರುಕಟ್ಟೆ ಮತ್ತು ಅದರ ಸುತ್ತಮುತ್ತ ನೀರು ಹರಿದು ಹೋಗುವ ಭಾಗಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ರಾಜ ಕಾಲುವೆಯ ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಳ್ಳದ ಎರಡೂ ಬದಿಗಳಲ್ಲಿ ಎತ್ತರದ ತಡೆಗೋಡೆ ನಿರ್ಮಿಸಿ ಮಳೆಯ ನೀರು ರಾಜ ಕಾಲುವೆಯ ಮೂಲಕ ಹರಿದು ಹೋಗಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸ್ಥಳೀಯ ಆಡಳಿತಕ್ಕೆ ಸೂಚಿಸಿದರು.
ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಶಿವಾನಂದಮೂರ್ತಿ, ತಹಸೀಲ್ದಾರ್ ಎಂ.ಶಿವಮೂರ್ತಿ, ಪುರಸಭೆಯ ಮುಖ್ಯಾಧಿಕಾರಿ ಎಂ.ಕುಮಾರ್ ಸೇರಿದಂತೆ ನೀರಾವರಿ ಇಲಾಖೆಯ ಎಂಜಿನಿಯರುಗಳು ಮತ್ತು ಸ್ಥಳೀಯ ಸಿಬ್ಬಂಧಿಗಳು ಹಾಜರಿದ್ದು ಅಗತ್ಯ ಮಾಹಿತಿ ನೀಡಿದರು.