ಮಳೆ ಹಾನಿ ದುರಸ್ತಿಗೆ 1905 ಕೋಟಿ ಅಂದಾಜು

ಬೆಂಗಳೂರು, ಸೆ. ೨೪- ರಾಜ್ಯದಲ್ಲಿ ೨೦೨೦-೨೧ನೇ ಸಾಲಿನಲ್ಲಿ ಪ್ರವಾಹ ಪೀಡಿತ ೨೫ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಆಸ್ತಿಪಾಸ್ತಿ ದುರಸ್ತಿಪಡಿಸಲು ೧೯೦೫.೫೮ ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಧಾನಪರಿಷತ್‌ನಲ್ಲಿಂದು ಹ ಳಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವರದಿಯಂತೆ ಹಾನಿಯಾದ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ ೧೧೦೦.೧೮ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವರದಿ ಪ್ರಕಾರ ರಸ್ತೆ ಮತ್ತು ಸೇತುವೆಗಳಿಗೆ ೭೬೦.೧೭ ಕೋಟಿ, ಕೆರೆಗಳಿಗೆ ೨೬.೩೫ ಕೋಟಿ, ಕಟ್ಟಡಗಳು, ಶಾಲಾ ಕಟ್ಟಡಗಳು, ಅಂಗನವಾಡಿ ಸೇರಿದಂತೆ ಇತರೆ ಸರ್ಕಾರಿ ಕಟ್ಟಡಗಳ ದುರಸ್ತಿಗೆ ೧೮.೫೫ ಕೋಟಿ, ನೈರ್ಮಲ್ಯ, ವಿದ್ಯುತ್ ದುರಸ್ತಿಗೆ ೩೫ ಲಕ್ಷ ಸೇರಿದಂತೆ ೧೯೦೫.೫೮ ಕೋಟಿ ಅಗತ್ಯವಿದೆ ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ಕಳೆದ ೨ ವರ್ಷಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಯಾವ ಯಾವ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದರು.
ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ, ಎಮ್ಮೆಗೆ ಜ್ವರ ಬಂದರೆ ಎಮ್ಮೆಗೆ, ಎತ್ತಿಗೆ ಜ್ವರ ಬಂದರೆ ಎತ್ತಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶ, ಆ ಕೆಲಸ ಮಾಡುತ್ತಿದ್ದೇವೆ ಎಂದರು.
ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜಹೊರಟ್ಟಿ, ಪ್ರಶ್ನೆಗೆ ಜ್ವರ ಬಂದರೆ ಏನು ಮಾಡುತ್ತೀರಿ ಎಂದು ಸಚಿವ ಈಶ್ವರಪ್ಪ ಅವರನ್ನು ಪ್ರಶ್ನಿಸಿ
ದರು. ಅದಕ್ಕೆ ಈಶ್ವರಪ್ಪ, ಅದು ಅವರವರ ಸಚಿವರಿಗೆ ಸಂಬಂಧಪಟ್ಟದ್ದು ಎಂದು ಹೇಳಿ
ದರು.
ಮನೆ ಮತ್ತು ಜೀವ ಹಾನಿ ನನ್ನ ಇಲಾಖೆಗೆ ಸಂಬಂಧಿಸಿದ್ದಲ್ಲ ಇದು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಹರಿಪ್ರಸಾದ್ ಅವರು ರಾಜ್ಯಸಭೆಯಲ್ಲಿ ಓಡಾಡಿಕೊಂಡು ಬಂದವರು. ಅವರು ಬುದ್ಧಿವಂತರು ಗೊತ್ತಿದ್ದರೂ ಪ್ರಶ್ನೆ ಕೇಳಿದ್ದಾರೆ ಎಂದರು.
ಮಧ್ಯ ಪ್ರವೇಶಿಸಿದ ಬಿಜೆಪಿಯ ಭಾರತಿಶೆಟ್ಟಿ, ಮೀನು ತಿನ್ನುವವರೆಲ್ಲಾ ಬುದ್ಧಿವಂತರು ಎಂದರು.
ಅದಕ್ಕೆ ಈಶ್ವರಪ್ಪ ಯಾಱ್ಯಾರು ಏನೇನೂ ತಿನ್ನುತ್ತಾರೆ ಎನ್ನುವುದು ಗೊತ್ತಿದೆ ಎಂದರು.
ರಾಜ್ಯದಲ್ಲಿ ಕಳೆದ ೨ ವರ್ಷಗಳಲ್ಲಿ ಪ್ರವಾಹದಿಂದ ಹಾನಿಯಾದ ರಸ್ತೆಗಳು, ಸೇತುವೆಗಳ ನಿರ್ಮಾಣಕ್ಕೆ ಇಲಾಖೆ ಆದ್ಯತೆ ನೀಡಿದೆ ಎಂದು ಹೇಳಿದರು.