ಮಳೆ ಹಾನಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ

ಕೋಲಾರ, ಮೇ ೨೬-ಮುಂಗಾರು ಮಳೆ ಆರಂಭವಾಗಿದ್ದು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಮುಂಗಾರು ಆರಂಭದ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸನ್ನದ್ದರಾಗಿರಬೇಕು. ಈ ಕುರಿತು ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ೨೦೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ಭಾರಿ ಮಳೆ, ಪ್ರವಾಹ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆ ಹೆಚ್ಚು ಬೀರುವ ಪ್ರದೇಶದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳು ಕ್ರಮವಹಿಸಬೇಕು. ತೊಂದರೆಗೀಡಾಗುವ ಸಂದರ್ಭ ಎದುರಾಗಬಹುದು. ಜನರ ಸ್ಥಳಾಂತರಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಭಾರಿ ಮಳೆ, ಪ್ರವಾಹ ಸಂದರ್ಭದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಒಂದು ವೇಳೆ ಜೀವ ಹಾನಿಯಾದಲ್ಲಿ ಪರಿಹಾರ ವಿತರಿಸುವಂತೆ ಸೂಚಿಸಿದರು. ಹಸು, ಎಮ್ಮೆ, ಎತ್ತು, ಕುರಿ, ಕೋಳಿ ಜೀವ ಹಾನಿಯಾದಲ್ಲಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಭಾರಿ ಮಳೆಯಿಂದಾಗಿ ಮನೆಗಳಿಗೆ ಸಂಪೂರ್ಣ ಹಾನಿಯಾದ ಗರಿಷ್ಠ ಪರಿಹಾರ ನೀಡಲಾಗುವುದು. ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದು, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳ ಕುರಿತು ತಪಾಸಣೆ ಮಾಡಿ ವಿದ್ಯುತ್ ಅವಘಡ ಆಗದಂತೆ ಕ್ರಮವಹಿಸಬೇಕು ಎಂದು ಬೆಸ್ಕಾಂ ಅಧಿಕಾರಿಗೆ ಸೂಚಿಸಿದರು.
ಕೆರೆಗಳಲ್ಲಿ ಈಜುವ ಮಕ್ಕಳಿಗೆ ಹಾಗೂ ಮೀನುಗಾರರಿಗೆ ಹೋಗದಿರುವಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೆರೆಗಳ ಪರಿಶೀಲನೆ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಸೂಚಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ಮಧ್ಯೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವುದರ ಕುರಿತು ಮತ್ತೊಮ್ಮೆ ಪರಿಶೀಲಿಸಿ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರೊಬೆಷನರಿ ಐ.ಎ.ಎಸ್. ಅಧಿಕಾರಿ ವಿನಾಯಕ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.