ಮಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದ ರೈತರ ನೆರವಿಗೆ ಧಾವಿಸಬೇಕು: ಹೆಚ್.ಡಿ ಕುಮಾರಸ್ವಾಮಿ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.23:- ಚುನಾವಣೆ ನೀತಿ ಸಂಹಿತೆ ಎಂಬ ಕಾರಣವೊಡ್ಡಿ ಎಸಿ ರೂಮ್ ನಲ್ಲಿ ಕುಳಿತಿರುವ ಅಧಿಕಾರಿಗಳು ಕೂಡಲೇ ಮಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ವಿವಿದೆಡೆ ಮಳೆಯಿಂದ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿ ಅವರು ಮಾತನಾಡಿದರು, ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸರ್ಕಾರದ ಯಾವ ಸಚಿವರಾಗಲಿ ಈವರೆಗೂ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಕನಿಷ್ಠ ಮಾಧ್ಯಮಗಳ ಮೂಲಕವಾದರೂ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ, ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ದೂರಿದ ಮುಖ್ಯಮಂತ್ರಿ ಮತ್ತು ಸಚಿವರು ಮತ್ತೆ ಇವಾಗ ಮಳೆ ಹಾನಿಯಿಂದ ನಷ್ಟಕ್ಕೆ ಒಳಗಾದ ರೈತರು ಹಾಗೂ ಸಾರ್ವಜನಿಕರಿಗೆ ಶೀಘ್ರ ಪರಿಹಾರ ವಿತರಿಸಲು ಮತ್ತೆ ಕೇಂದ್ರ ಸರ್ಕಾರದ ಕಡೆ ದೂರುತ್ತಾರೆ ಎಂದು ವ್ಯಂಗ್ಯವಾಡಿ ಈ ಬಾರಿ ಬರಗಾಲದ ನಡುವೆಯೂ ಮಳೆಯಾದ ಸಂದರ್ಭ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಆದರೆ ಅತಿ ಹೆಚ್ಚು ಮಳೆಯಿಂದಾಗಿ ನಷ್ಟಕೊಳಗಾಗಿದ್ದಾರೆ, ರಾಜ್ಯದ ಹಲವೆಡೆ ವ್ಯಾಪಕ ಮಳೆಯಿಂದ ವಾಣಿಜ್ಯ ಬೆಳೆಗಳಾದ ಬಾಳೆ, ದಾಳಿಂಬೆ, ಅಡಿಕೆ, ಶುಂಠಿ, ತಂಬಾಕು ಮತ್ತಿತರ ಬೆಳೆಗಳು ನೆಲಕಚ್ಚಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಬೆಳೆ ಹಾನಿಯಿಂದ ನಷ್ಟಕ್ಕೊಳಗಾದ ರೈತರು ಆತ್ಮಹತ್ಯೆ ದಾರಿ ತುಳಿಯಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಕೂಡಲೇ ಸರ್ಕಾರ ಅಧಿಕಾರಿಗಳ ಮೂಲಕ ವರದಿ ತರಿಸಿಕೊಂಡು ಪರಿಹಾರ ವಿತರಿಸುವಂತೆ ಒತ್ತಾಯಿಸಿದರು. 
ಪಿರಿಯಾಪಟ್ಟಣ ತಾಲೂಕಿನ ಶಿಲ್ಪಾ ಎಂಬ ರೈತ ಮಹಿಳೆಯೊಬ್ಬರು ತಲಾ 50 ಸಾವಿರ ರೂ ಗಳಂತೆ 7 ಜನರಿಂದ ಕೃಷಿ ಭೂಮಿ ಗುತ್ತಿಗೆ ಪಡೆದು ಸಾಲ ಮಾಡಿ ತಂಬಾಕು ನಾಟಿ ಮಾಡಿ ಸುಮಾರು 7 ಲಕ್ಷ ರೂ ವೆಚ್ಚವಾಗಿದೆ ಆದರೆ ಈಗ ಮಳೆಯಿಂದ ತಂಬಾಕು ಬೆಳೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಆ ಮಹಿಳೆ ಸಾಲ ತೀರಿಸುವ ಬಗೆ ಹೇಗೆ ಎಂದು ಪ್ರಶ್ನಿಸಿ ಇದೇ ರೀತಿ ರಾಜ್ಯದಲ್ಲಿ ಲಕ್ಷಾಂತರ ರೈತರು ನಷ್ಟ ಅನುಭವಿಸಿದ್ದು ಸರ್ಕಾರ ಅವರ ನೆರವಿಗೆ ಬರುವ ಅಗತ್ಯವಿದೆ, ಮಳೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ನನ್ನ ಕೇವಲ ಎರಡು ಗಂಟೆಯ ಭೇಟಿಯ ಅವಧಿಯಲ್ಲಿ ಅಂದಾಜಿಸಲು ಸಾಧ್ಯವಿಲ್ಲ ಎಂದ ಅವರು ಸರ್ಕಾರ ಕೂಡಲೇ ಅಧಿಕಾರಿಗಳನ್ನು ನೇಮಿಸಿ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆಯಲಿ ಎಂದರು.
ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿರುವ ರಾಗಿಗೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ ಖರೀದಿ ಸಂದರ್ಭ 4 ಕೆಜಿ ಕಡಿತಗೊಳಿಸುತ್ತಿರುವುದು ವರದಿಯಾಗಿದ್ದು ಪದೇಪದೇ ರೈತನ ಮೇಲೆ ಅನ್ಯಾಯವಾಗುತ್ತಿದ್ದರೂ ಸರ್ಕಾರದ ಗಮನಕ್ಕೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು. 
ನಾನು ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂಬ ವಿಷಯ ತಿಳಿದ ತಾಲೂಕಿನ ಶಾಸಕ ಹಾಗೂ ಸಚಿವ ಕೆ.ವೆಂಕಟೇಶ್ ಅವರು ನನಗಿಂತ ಒಂದು ಗಂಟೆ ಮುಂಚೆಯೇ ತರಾತುರಿಯಲ್ಲಿ ಭೇಟಿ ನೀಡಿ ಹೋಗಿದ್ದಾರೆ ಅವರನ್ನು ಅಭಿನಂದಿಸುತ್ತೇನೆ ಎಂದು ವ್ಯಂಗ್ಯದ ಮಾತನಾಡಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಾಂತ್ವನ ಹೇಳುವ ಬದಲು ಕರಾಬು ಜಾಗದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದೀರಾ ಎಂದು ಸಚಿವರು ಪ್ರಶ್ನಿಸಿ ಹೋಗಿರುವುದು ಅವರ ಘನತೆಗೆ ತಕ್ಕುದಲ್ಲ ಎಂದರು.
ಮಳೆ ಹಾನಿಯಿಂದಾಗಿ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಜೆಡಿಎಸ್ ಪಕ್ಷದ ಮುಖಂಡರು ಶಾಸಕರೊಂದಿಗೆ ಚರ್ಚಿಸಿ ನಮ್ಮ ಪಕ್ಷದ ವತಿಯಿಂದಲೂ ರೈತರಿಗೆ ನೆರವು ನೀಡಲು ಚಿಂತನೆ ಮಾಡುವುದಾಗಿ ತಿಳಿಸಿದರು.
ಈ ವೇಳೆ ಪಿರಿಯಾಪಟ್ಟಣ ತಾಲ್ಲೂಕಿನ ಚಪ್ಪರದಹಳ್ಳಿ  ಹಾರನಹಳ್ಳಿ ಹಾಗೂ ಅಂಬಲಾರೆ  ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದರು.
ಈ ಸಂದರ್ಭ ಶಾಸಕರಾದ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಕೆ.ಮಹದೇವ್, ತಾಲೂಕು ಜೆಡಿಎಸ್ ಘಟಕ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ಅಧ್ಯಕ್ಷ ಕೊಪ್ಪ ರಾಜೇಂದ್ರ, ಮಾಜಿ ಮೇಯರ್ ರವಿಕುಮಾರ್, ಮುಖಂಡರಾದ ಸಿ.ಎನ್ ರವಿ, ಎಂ.ಎಂ ರಾಜೇಗೌಡ, ಆರ್.ಟಿ ಸತೀಶ್, ಅತ್ತರ್ ಮತಿನ್, ವಿದ್ಯಾಶಂಕರ್, ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.