ಮಳೆ ಸಮಸ್ಯೆ ಪರಿಹರಿಸಲು ಕ್ರಮ : ಬೊಮ್ಮಾಯಿ

ಮಹದೇವಪುರ ಕ್ಷೇತ್ರದ ನಲ್ಲೂರಹಳ್ಳಿಯ ಅಪಾರ್ಟ್ ಮೆಂಟ್ ನುಗ್ಗಿದ ಮಳೆ ನೀರು

ಬೆಂಗಳೂರು, ಸೆ. ೫- ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಆಗಿರುವ ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಏನೆಲ್ಲಾ ಯೋಜನೆ ಮಾಡಬೇಕೋ ಅದನ್ನೆಲ್ಲಾ ಮಾಡಿಕೊಂಡಿದ್ದೇವೆ. ಇಂದು ಅದನ್ನು ಕಾರ್ಯಗತ ಮಾಡುವ ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಆಗಿರುವ ತೊಂದರೆಗಳ ಬಗ್ಗೆ ಬಿಬಿಎಂಪಿ ಆಯುಕ್ತರಿಂದ ಮಾಹಿತಿ ಪಡೆದಿದ್ದೇನೆ. ವಿಶೇಷವಾಗಿ ಮೊನ್ನೆ ಮಳೆಯಾದ ಸ್ಥಳದಲ್ಲೆ ಮತ್ತೆ ಮಳೆಯಾಗಿದೆ. ಬೊಮ್ಮನಹಳ್ಳಿ, ಮಹದೇವಪುರಗಳಲ್ಲಿ ಭಾರಿ ಮಳೆಯಾಗಿ ತೊಂದರೆಯಾಗಿದೆ. ಈ ಎರಡೂ ಕಡೆ ಎಸ್‌ಡಿಆರ್ ತಂಡವನ್ನು ಕಳುಹಿಸಲು ಸೂಚನೆ ನೀಡಿದ್ದೇನೆ ಎಂದರು.
ಮಳೆಯಿಂದ ಜಲಾವೃತಗೊಂಡಿರುವ ಪ್ರದೇಶಗಳ ಜನರ ಸುರಕ್ಷತೆಗೆ ಅಗತ್ಯಬಿದ್ದರೆ ಬೋಟ್‌ಗಳನ್ನು ತರಿಸಿಕೊಳ್ಳುವಂತೆ ಹೇಳಿದ್ದೇನೆ. ಬಿಬಿಎಂಪಿ ಇಂಜಿನಿಯರ್‌ಗಳು ಸ್ಥಳದಲ್ಲೇ ಇದ್ದು ಪರಿಹಾರ ಕಾರ್ಯ ನಡೆಸಿದ್ದಾರೆ ಎಂದರು.
ರಸ್ತೆಗಳ ಮೇಲೆ ನಿಂತಿರುವ ನೀರನ್ನು ಕ್ಲೀಯರ್ ಮಾಡುವಂತೆ ಆದೇಶಿಸಿದ್ದೇನೆ. ಭಾರಿ ಮಳೆಯಿಂದ ತೊಂದರೆಗಳಾಗಿವೆ ಎಂದರು.
ಪರಿಶೀಲನೆ ಮಳೆಯಿಂದ ಬೆಂಗಳೂರಿಗೆ ಕಾವೇರಿ ನೀರು ಒದಗಿಸುವ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಪಂಪ್‌ಸ್ಟೇಷನ್‌ಗೂ ನೀರು ನುಗ್ಗಿದೆ. ಯಂತ್ರೋಪಕರಣಗಳು ಸ್ಥಗಿತಗೊಂಡಿದ್ದು, ಇಲ್ಲಿಗೆ ನಾನು ಮಧ್ಯಾಹ್ನ ಹೋಗಿ ಪರಿಶೀಲನೆ ಮಾಡುತ್ತನೆ ಎಂದರು.
ಈಗಾಗಲೇ ಈ ಬಗ್ಗೆ ಜಲಮಂಡಳಿ ಅಧ್ಯಕ್ಷರ ಜತೆ ಮಾತನಾಡಿದ್ದೇನೆ. ಅವರು ಸ್ಥಳಕ್ಕೆ ತೆರಳಿದ್ದಾರೆ. ಸಂಜೆಯೊಳಗೆ ಯಂತ್ರೋಪಕರಣಗಳು ಮತ್ತೆ ಚಾಲನೆಯಾಗುತ್ತವೆ. ಪಂಪ್ ಸ್ಟೇಷನ್‌ನಲ್ಲಿ ತುಂಬಿರುವ ನೀರನ್ನು ಹೊರ ತೆಗೆಯುವ ಕೆಲಸ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.