ಮಳೆ ಸಂತ್ರಸ್ತರಿಗೆ ಶೀಘ್ರವಾಗಿ ಸ್ಪಂದಿಸಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸಚಿವರ ಸೂಚನೆ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜು. 27; ಪ್ರಸಕ್ತ ವಾರದಲ್ಲಿ ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಿದ್ದು, ಅಧಿಕಾರಿಗಳು ಮಳೆ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವಾಗಿ ಮತ್ತು ಉದಾರವಾಗಿ ಸ್ಪಂದಿಸಿ ನಿಯಮಾನುಸಾರ ಪರಿಹಾರಗಳನ್ನು ಒದಗಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮತ್ತು ಅಡಿಕೆ ಬೆಳೆಯ ಎಲೆಚುಕ್ಕಿ ರೋಗದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಬಾರಿ ಸ್ವಲ್ಪ ತಡವಾಗಿ ಮಳೆ ಆರಂಭವಾಗಿದೆ. ಅಂತಹ ಪ್ರಾಕೃತಿಕ ಹಾನಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ, ಕೆಲವೆಡೆ ರಸ್ತೆ, ಸೇತುವೆ, ಬೆಳೆ ಹಾನಿ ಹೀಗೆ ಕೆಲವೆಡೆ ಮೂಲಭೂತ ಸೌಕರ್ಯಗಳಿಗೆ ಹಾನಿ ಸಂಭವಿಸಿದ್ದು ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿ ಎಚ್ಚರಿಕೆಯಿಂದಿದ್ದು ಶೀಘ್ರವಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾಡಿ ಡಾ.ಸೆಲ್ವಮಣಿ ಆರ್ ಮಾತನಾಡಿ, 2023 ರ ಮಾರ್ಚ್ 1 ರಿಂದ ಮೇ 31 ರವರೆಗೆ ಜಿಲ್ಲೆಯಲ್ಲಿ 82 ಮಿ.ಮೀ ಮಳೆಯಾಗಿದೆ. ವಾಡಿಕೆ ಮಳೆ 127 ಇದ್ದು ಶೇ.36 ಮಳೆ ಕೊರತೆ ಕಂಡು ಬಂದಿದೆ. ಜೂನ್ ಮಾಹೆಯಲ್ಲಿ 472 ಮಿ.ಮೀ ವಾಡಿಕೆಗೆ 120 ಮಿ.ಮೀ ವಾಸ್ತವವಾಗಿ ಮಳೆಯಾಗಿದ್ದು ಶೇ.75 ಮಳೆ ಕೊರತೆ ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ 22.3 ಮಿ.ಮೀ ವಾಡಿಕೆಗೆ 58.4 ಮಿ.ಮೀ ಮಳೆಯಾಗಿದ್ದು ಜಿಲ್ಲೆಯಲ್ಲಿ ಸರಾಸರಿ 162 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1223.5 ಮಿ.ಮೀ ವಾಡಿಕೆ ಮಳೆಗೆ 949.5 ಮಿ.ಮೀ ವಾಸ್ತವ ಮಳೆಯಾಗಿದ್ದು ಶೇ.22 ಮಳೆ ಕೊರತೆಯಾಗಿದೆ.ಲಿಂಗನಮಕ್ಕಿ ಜಲಾಶಯದ ಗರಿಷ್ಟ ಮಟ್ಟ 1819 ಅಡಿ, ಕಳೆದ ವರ್ಷ 1798.1 ಅಡಿ ಭರ್ತಿಯಾಗಿದ್ದು ಹಾಲಿ 1778.9 ಅಡಿ ಭರ್ತಿಯಾಗಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186  ಅಡಿ ಇದ್ದು ಕಳೆದ ವರ್ಷ ಈ ವೇಳೆಗೆ 181.95 ಅಡಿ ಭತಿ9ಯಾಗಿತ್ತು. ಹಾಲಿ 152.9 ಅಡಿ ನೀರಿದೆ ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸಾಗರ ತಾಲ್ಲೂಕಿನಲ್ಲಿ 500 ಹೆಕ್ಟೇರ್‍ಬೆಳೆ ಹಾಗೂ ಸಾಗರದಲ್ಲಿ 315 ಬೆಳೆ ಜಲಾವೃತವಾಗಿದೆ. ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಬಿತ್ತನೆ ಬೀಜದ ಕೊರತೆ ಇಲ್ಲ. 15500 ರೈತರು ಬೆಳೆ ವಿಮೆ ಮಾಡಿಸಿದ್ದು, 31-07-2023 ರವರೆಗೆ ನೋಂದಣಿಗೆ ಸಮಯಾವಾಕಾಶ ಇದೆ ಎಂದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಜಿಲ್ಲೆಯಲ್ಲಿ 30.52 ಹೆಕ್ಟೇರ್ ಬಾಳೆ, ಶುಂಠಿ ಹಾನಿಗೊಳಗಾಗಿದೆ ಎಂದರು.ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಮಳೆ ಪರಿಹಾರ ಕುರಿತಾದ ಮಾರ್ಗಸೂಚಿ ಬಂದಿಲ್ಲದ ಕಾರಣ ಪರಿಹಾರ ತಡವಾಗುತ್ತಿದೆ. ಸಂತ್ರಸ್ತರಿಗೆ ವಿಳಂಬ ಮಾಡದೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದರು.