ಮಳೆ ಸಂಕಷ್ಟ ನಿವಾರಣೆಗೆ ಬಿಬಿಎಂಪಿ ಸಿದ್ಧತೆ

ಬೆಂಗಳೂರು, ಆ.೨೯- ಮಳೆ ಸುರಿಯುತ್ತಿರುವುದರಿಂದ ಎದಿರಾಗುವ ಸಂಕಷ್ಟ ನಿವಾರಿಸಲು ಬಿಬಿಎಂಪಿ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಬಿಎಂಪಿ ತೆಗೆದುಕೊಂಡಿದೆ ಎಂದರು.
ಅದರಲ್ಲೂ, ಶಾಶ್ವತವಾಗಿ ಮಳೆ ನಿಲ್ಲುವ ಪ್ರದೇಶಗಳಿಗೆ ಪಂಪಿಂಗ್ ವ್ಯವಸ್ಥೆ ಮಾಡಲಾಗಿದೆ ಪ್ರಮುಖವಾಗಿ ಸಾಯಿ ಲೇಔಟ್, ಪೈಲೇಔಟ್, ಹೆಚ್ ಎಸ್ ಆರ್ ಕಡೆಗಳಲ್ಲಿ ಖಾಯಂ ಪಂಪ್ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಶ್ವತ ಸಮಸ್ಯೆ ಬಗೆಹರಿಯುವವರೆಗೂ ಮಳೆ ನೀರು ನಿಂತಾಗ ಹೊರ ತೆಗೆಯಲಾಗುತ್ತದೆ ಎಂದ ಅವರು, ಒಟ್ಟು ಬೆಂಗಳೂರಿನ ೫೦ ಕಡೆ ನೀರು ನಿಲ್ಲುತಿತ್ತು. ಹಾಗಾಗಿ, ಜೆಸಿಬಿಯಿಂದ ರಾಜಕಾಲುವೆಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಇನ್ನೂ, ರಸ್ತೆ ಗುಂಡಿ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅವರು, ಕೋಲ್ಡ್ ಮಿಕ್ಸ್ ಬಳಕೆ ಆಗುತ್ತಿದ್ದು, ಮಳೆ ಇರದಿದ್ದಲ್ಲಿ ಹಾಟ್ ಮಿಕ್ದ್ ಬಳಕೆ ಮಾಡಿ ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ನುಡಿದರು.