ಮಳೆ ರಗಳೆ ತಡೆಗೆ ಪಾಲಿಕೆಯಿಂದ ಕಂಟ್ರೋಲ್ ರೂಂ

ಬೆಂಗಳೂರು, ಮೇ೨೪- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಅಬ್ಬರದಿಂದ ಆಗುತ್ತಿರುವ ಪ್ರಾಣಹಾನಿ ತಪ್ಪಿಸಲು ಮುಂದಾಗಿರುವ ಬೃಹತ್ ಬೆಂಗಳೂರು ನಗರ ಪಾಲಿಕೆ ನಾಗರಿಕರ ಅನುಕೂಲಕ್ಕಾಗಿ ಕಂಟ್ರೋಲ್ ರೂಂ ಸ್ಥಾಪಿಸಲು ತೀರ್ಮಾನಿಸಿದೆ.
ಮೊನ್ನೆ ಕೆಆರ್ ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಯುವತಿ ಮೃತಪಟ್ಟ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಮಳೆ ಮುಂದುವರೆಯಲಿರುವ ಕಾರಣದಿಂದ ಮಳೆ ಅವಘಡ ತಪ್ಪಿಸಲು ಈ ಕಂಟ್ರೋಲ್ ರೂಮ್ ಸ್ಥಾಪನೆಗೆ ಮುಂದಾಗಿದ್ದು, ಮಳೆಯ ಸಮಯದಲ್ಲಿ ಜನರಿಗೆ ಸಹಾಯ ಮಾಡಲಿವೆ.
ಪಾಲಿಕೆ ಉಪವಿಭಾಗ ಮಟ್ಟದಲ್ಲಿ ೬೩ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ಜೂನ್ ೧ಕ್ಕೆ ಈ ಕೊಠಡಿಗಳು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಬಿಬಿಎಂಪಿ ತಾತ್ಕಾಲಿಕ ಮುಂಗಾರು ಮಳೆಗೆ ಕಂಟ್ರೋಲ್ ರೂಂಗಳ ಸ್ಥಾಪನೆಗೆ ಟೆಂಡರ್ ನಡೆಸಿದ್ದು, ಪ್ರತಿ ನಿಯಂತ್ರಣ ಕೊಠಡಿಗೆ ಸುಮಾರು ೧.೨೫ ಲಕ್ಷ ರೂ. ವೆಚ್ಚವಾಗಲಿದೆ. ನಿಯಂತ್ರಣ ಕೊಠಡಿಗಳು ವರ್ಷವಿಡೀ ವಲಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಗಾರು ಸಮಯದಲ್ಲಿ, ನಾವು ಉಪ-ವಿಭಾಗ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುತ್ತೇವೆ. ಭಾರೀ ಮಳೆಯಿಂದ ಉಂಟಾಗುವ ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಯ ಮೂಲಕ ಸಮಸ್ಯೆಯ ಮಾಹಿತಿ ಕಲೆ ಹಾಕಿ ಸಮಸ್ಯೆಯನ್ನು ಪರಿಹರಿಸಲಾಗುತ್ತೆ ಎಂದು ಅಧಿಕಾರಿ ತಿಳಿಸಿದರು.
ಪ್ರತಿಯೊಂದು ನಿಯಂತ್ರಣ ಕೊಠಡಿಯು ಎಲ್ಲಾ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ರೀತಿ ಸಂಪೂರ್ಣವಾಗಿ ಸಜ್ಜುಗೊಳಿಸಲಾಗುತ್ತದೆ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೂಲಕ ಇದು ನಿರ್ವಹಿಸಲ್ಪಡುತ್ತದೆ. ಇದು ಐದು ಸಿಬ್ಬಂದಿ ತಂಡವಾಗಿರುತ್ತದೆ.
ನಿಯಂತ್ರಣ ಕೊಠಡಿಗಳಲ್ಲಿ ಮರಗಳು ಬಿದ್ದ ಸಂದರ್ಭದಲ್ಲಿ ಮರ ಕಡಿಯುವ ಉಪಕರಣಗಳು, ಮುಳುಗಡೆಯ ಸಂದರ್ಭದಲ್ಲಿ ೧೦ ಎಚ್‌ಪಿ ನೀರಿನ ಪಂಪ್‌ಗಳು, ಮಣ್ಣು ತೆಗೆಯುವ ಯಂತ್ರಗಳು ಮತ್ತು ಸಿಬ್ಬಂದಿಗೆ ತುರ್ತು ಸಹಾಯಕ್ಕಾಗಿ ಗಂಬೂಟ್ ಮತ್ತು ಜಾಕೆಟ್‌ಗಳನ್ನು ಬಳಸಿಕೊಳ್ಳಲು ಎಲ್ಲಾ ರೀತಿಯ ಉಪಕರಣಗಳು ಲಭ್ಯವಿರಲಿದೆ. ಸಮಸ್ಯೆ ಏನೆಂದು ತಿಳಿದು ಸಿಬ್ಬಂದಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತಾರೆ ಎಂದು ಅಧಿಕಾರಿ ವಿವರಿಸಿದರು.
ಅದು ಅಲ್ಲದೆ, ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಹಲವೆಡೆ ಮಹಾ ಮಳೆಯಿಂದ ಅನೇಕ ಅವಘಡಗಳು ಸಂಭವಿಸಿವೆ. ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಮನೆಗಳಲ್ಲಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿವೆ.

ದೂರು ಪರಿಶೀಲನೆ
ವಲಯವಾರು ಮಳೆಹಾನಿ ಸಂಬಂಧಿಸಿದ ದೂರುಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪರಿಶೀಲನೆ ನಡೆಸಿದ್ದಾರೆ.ಸಹಾಯ ತಂತ್ರಾಂಶದಲ್ಲಿ ಸುಮಾರು ೭೦ ದೂರು ಪಡೆದಿದ್ದಾರೆ.
ಮೂರು ದಿನಗಳೊಳಗಾಗಿ ಬಂದಿರುವಂತಹ ದೂರುಗಳನ್ನು ಪರಿಹರಿಸಲು ಸೂಚನೆ ನೀಡಿದ್ದು, ನಿರಾಕರಿಸಿದಲ್ಲಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ವಹಿಸುವುದಾಗಿ ಹೇಳಿದ್ದಾರೆ.