ಮಳೆ ಬೆಳೆಗೆ ವಿಶೇಷ ಕ್ರಿಸ್ಮಸ್ ಪೂಜೆ  – ಫಾದರ್ ಆನಂದ ಪ್ರಸಾದ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಡಿ.25 :- ಬರಗಾಲ ಆವರಿಸಿರುವ ಈ ದಿನಗಳನ್ನು  ಮುಕ್ತಗೊಳಿಸಿ ಆ ಯೇಸು ಪ್ರಭುವು ಉತ್ತಮ ಮಳೆ ಬೆಳೆ ನೀಡುವಂತೆ ಕ್ರಿಸ್ಮಸ್ ಹಬ್ಬದ ದಿನದ ಮುನ್ನದಿನದ ಕಳೆದ ಮದ್ಯ ರಾತ್ರಿ ಯೇಸು ಪ್ರಭುವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ಕೂಡ್ಲಿಗಿ ಸಂತ ಮೈಕಲ್ ಚರ್ಚ್ ಫಾದರ್ ಆನಂದ ಪ್ರಸಾದ ತಿಳಿಸಿದರು.
ಅವರು ಸಂತ ಮೈಕಲ್ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಡಿಸೆಂಬರ 24ರ  ಮಧ್ಯರಾತ್ರಿ12 ಗಂಟೆಗೆ ದಿವ್ಯ ಬಲಿ ಪೂಜೆ, ಪ್ರಾರ್ಥನೆ, ಹಾಗೂ ಕ್ರಿಸ್ಮಸ್ ಕ್ಯಾರೆಲ್ಸ್ ಹಾಡುತ್ತಾ  ಸಕಾಲಕ್ಕೆ ಮಳೆಯಾಗದೆ ರೈತರ ಬೆಳೆ ಹಾಳಾಗಿದ್ದು ಆ ದೇವರು ಜನರ ಉತ್ತಮ ಜೀವನಕ್ಕೆ ರೈತರ ಬದುಕು ಹಸನಾಗಲು ಉತ್ತಮ  ಮಳೆ, ಬೆಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕ ಫಾದರ್ ದಾನಪ್ಪ ಮಾತನಾಡಿ ಇಡೀ ವಿಶ್ವವೂ ಶಾಂತಿಯಲ್ಲಿ ನೆಲೆಸುವಂತೆ,  ದನದ ಕೊಟ್ಟಿಗೆಯಲ್ಲಿ ಜನಿಸಿದ ಪ್ರಭು ಕ್ರಿಸ್ತರು ಶಾಂತಿ ದೂತರಾಗಿ ಶಾಂತಿಯನ್ನೇ ಸಾರಿದರು. ಪ್ರತಿಯೊಬ್ಬ ಮಾನವನು ಪರಸ್ಪರ ಶಾಂತಿ ಮತ್ತು ಪ್ರೀತಿಯಿಂದ ಜೀವಿಸಲಿ ಎಂದು ಕರೆ ನೀಡಲಾಯಿತು ಎಂದು ತಿಳಿಸಿದರು.
ಹಬ್ಬದ ಪ್ರಯುಕ್ತ ಕ್ರಿಸ್ಮಸ್ ಕೇಕನ್ನು ಕತ್ತರಿಸಿ ನೆರೆದ  ಭಕ್ತಸಮೂಹಕ್ಕೆ ವಿತರಿಸಲಾಯಿತು. ಯೇಸು ಜನಿಸಿದ ದನದ ಕೊಟ್ಟಿಗೆ ಗೋದಲ್ಲಿ ಮಾದರಿ ಚಿತ್ರವನ್ನು ನಿರ್ಮಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು.