ಬ್ಯಾಡಗಿ,ಜೂ17: ಸಕಾಲಕ್ಕೆ ಮಳೆ ಬಾರದೇ ನೀರಿನ ಅಭಾವದಿಂದ ಒಣಗುತ್ತಿದ್ದ ತನ್ನ 10ಎಕರೆಯಷ್ಟು ಕಬ್ಬಿನ ಬೆಳೆಯನ್ನು ರೈತನೋರ್ವ ಟ್ರ್ಯಾಕ್ಟರನಿಂದ ನಾಶ ಪಡಿಸಿದ ಘಟನೆ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರೈತ ಮಲ್ಲೇಶಪ್ಪ ಡಂಬಳ ಎನ್ನುವರು ತಮ್ಮ 10ಎಕರೆ ಹೊಲದಲ್ಲಿ ಕಬ್ಬು ಬಿತ್ತನೆ ಮಾಡಿದ್ದು, ಈಗಿನ ಬೆಳೆ ಎರಡನೇ ಕುಳಿಯಾಗಿತ್ತು. ಇದಕ್ಕಾಗಿ ಸುಮಾರು 5ಲಕ್ಷ ರೂಗಳನ್ನು ವ್ಯಯಿಸಿದ್ದರು ಎನ್ನಲಾಗಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ನೀರಿನ ಅಭಾವದಿಂದ ಕಬ್ಬಿನ ಬೆಳೆಯು ಒಣಗಲು ಪ್ರಾರಂಭಿಸಿದ್ದು, ಅದನ್ನು ದಿನನಿತ್ಯವೂ ನೋಡಿ ನೋವನ್ನು ಅನುಭವಿಸುತ್ತಿದ್ದ ಮಲ್ಲೇಶಪ್ಪ ಕೊನೆಗೆ ಇಡೀ ಕಬ್ಬಿನ ಹೊಲವನ್ನೇ ಟ್ರ್ಯಾಕ್ಟರ್ ಮೂಲಕ ಅರಗಿ ನಾಶ ಪಡಿಸಿದ್ದಾನೆ.
ನೀರಾವರಿ ಮಾಡುವ ಇಚ್ಛಾಶಕ್ತಿಯಿಂದ ತನ್ನ ಹೊಲದಲ್ಲಿ 4ಕೊಳವೆ ಬಾವಿಗಳನ್ನು ಕೊರೆಸಿದ್ದ ಮಲ್ಲೇಶಪ್ಪ ಡಂಬಳ ಅವರು, ನೀರಾವರಿಯ ಸೌಲಭ್ಯದಿಂದ ಕಬ್ಬನ್ನು ಬೆಳೆಯುತ್ತಿದ್ದ, ಆದರೆ ದುರಾದೃಷ್ಟ ಎಂಬಂತೆ ಇರುವ 4ಕೊಳವೆ ಬಾವಿಗಳಲ್ಲಿ ಮೂರರಲ್ಲಿ ನೀರು ಬತ್ತಿ ಹೋಗಿವೆ. ಇರುವ ಒಂದೇ ಕೊಳವೆ ಬಾವಿಯಲ್ಲಿ ಕಬ್ಬನ್ನು ಬೆಳೆಯುವುದು ಅಸಾಧ್ಯ ಎಂದು ತೀರ್ಮಾನಿಸಿ ತನ್ನ ಇಡೀ ಕಬ್ಬಿನ ಹೊಲವನ್ನು ನಾಶ ಪಡಿಸಿದ್ದಾನೆ. ಸಕಾಲಕ್ಕೆ ಮಳೆ ಆಗಿದ್ದರೆ ಎಕರೆಗೆ 17ರಿಂದ 25ಟನ್ ಕಬ್ಬಿನ ಇಳುವರಿಯನ್ನು ಪಡೆಯಬಹುದಾಗಿತ್ತು. ಇದರಿಂದ ಸುಮಾರು 12ರಿಂದ 15ಲಕ್ಷದವರೆಗೆ ಕಬ್ಬಿನ ಬೆಳೆ ಕೈಸೇರುವ ನಿರೀಕ್ಷೆಯನ್ನು ಹೊಂದಿದ್ದ ರೈತ ಮಲ್ಲೇಶಪ್ಪ ಡಂಬಳ ಅನಾವೃಷ್ಟಿಯ ಹೊಡೆತಕ್ಕೆ ಲಕ್ಷಾಂತರ ರೂಗಳ ನಷ್ಟವನ್ನು ಅನುಭವಿಸುವಂತಾಗಿದೆ.