ಮಳೆ ಬಂದಾಗ ಸಿರಿಗೇರಿ-ತೆಕ್ಕಲಕೋಟೆ ರಸ್ತೆಯಲ್ಲಿ ಸಂಚಾರ ಜೋಕೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಸೆ09. ಗ್ರಾಮದ ಒಳರಸ್ತೆಯಾದ ಸಿರಿಗೇರಿ-ತೆಕ್ಕಲಕೋಟೆ ರಸ್ತೆಯು ಕೊನೆಗೆ ಡಾಂಬಾರ್ ಕಾಣದೇ ಹೊಲಗಳಿಗೆ ಹೋಗುವ ದಾರಿಯಾಗಿ ಮಾರ್ಪಾಡಾಗಿರುವುದು ಹಿಂದೆ ಇದ್ದ ಬಂಡಿದಾರಿ ಆವಸ್ಥೆಗೆ ಬರಬಹುದೇನೋ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಈಗ ದಿನಬಿಟ್ಟುದಿನ ಅಥವಾ ಪ್ರತಿನಿತ್ಯ ಮಳೆ ಬರುತ್ತಿರುವುದರಿಂದ ರಸ್ತೆಯು ಕೆಸರಿನಿಂದಾಗಿ ಗಾಡಿಗಳು ಜಾರಿಬೀಳುವ ಆತಂಕದಲ್ಲಿ ಸಾಗಬೇಕಿದೆ. ಒಂದುವರ್ಷ ಪೂರಾ ರಸ್ತೆಯು ರಿಪೇರಿಯಾಗದೇ ಪ್ರತೀವರ್ಷ ಅರ್ಧ ಕಿಲೊಮೀಟರ್, ಒಂದೆರಡು ಕಿಲೋಮೀಟರ್ ರಸ್ತೆಯು ದುರಸ್ತಿಯಾಗಿ ಒಂದುಕಡೆ ರಸ್ತೆಯಾಗುವಷ್ಟರಲ್ಲಿ ಇನ್ನೊಂದು ಕಡೆಯ ರಸ್ತೆಯು ಕೆಟ್ಟುಹೋಗುವ ನೀತಿಯನ್ನು ದುರಸ್ಥಿ ಮಾಡಿಸುವಲ್ಲಿ ಅನುಸರಿಸಲಾಗುತ್ತಿದೆ. ಸಿರುಗುಪ್ಪ, ಕುರುಗೋಡು, ಕಂಪ್ಲಿ, ಸಂಡೂರು ತಾಲೂಕೂ ವ್ಯಾಪ್ತಿ ಗ್ರಾಮಗಳಿಗೆ ಬಹು ಹತ್ತಿರವಾಗುವ ಈ ರಸ್ತೆಗೆ ಇಲ್ಲಿಯವರೆಗೂ ಶಾಶ್ವತ ಸಂಪೂರ್ಣ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿಲ್ಲ. ಕಳೆದವರ್ಷ ರಸ್ತೆಯನ್ನು ಎತ್ತರಿಸಿ ಬಿಂಚೆ, ಮೊರಂ ಹಾಕಿ ಕೈಬಿಡಲಾಗಿದ್ದು, ಈಗ ಮಳೆಬಂದಾಗ ಕೆಸರು ಗದ್ದೆಯಂತೆ, ಬಿಸಿಲಿಗೆ ಧೂಳಿನ ರಸ್ತೆಯಾಗಿ ಪ್ರಯಾಣಿಕರಿಗೆ ಒಂದಿಲ್ಲೊಂದು ಸಮಸ್ಯೆ ನೀಡುತ್ತಿದೆ. ಸಮೀಪವಾಗುತ್ತದೆ ಎಂದು ಹೊಟ್ಟೆಕಿಚ್ಚಿಗೆ ಈ ರಸ್ತೆಯಲ್ಲಿ ಓಡಾಡುವುದು ಅನಿವಾರ್ಯವಾಗಿದೆ. ಕೂಡಲೇ ಸಂಬಂಧಪಟ್ಟವರು ಈ ರಸ್ತೆಗೆ ಶಾಶ್ವತ ಪರಿಹಾರದ ಸಂಪೂರ್ಣ ಡಾಂಬರ್ ರಸ್ತೆಯನ್ನು ಮಾಡಿಸಿ ಮುಕ್ತಿ ನೀಡಬೇಕಾಗಿದೆ ಎಂಬುದು ಸಾರ್ವಜನಿಕರ, ಪ್ರಯಾಣಿಕರ ಆಗ್ರಹವಾಗಿದೆ.