ಮಳೆ ಬಂದರೆ ಗುಂಡಿಗನೂರು  ಹಾವಿನಾಳು ರಸ್ತೆಯ ದುಸ್ಥಿತಿ ಇದು.


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.30. ಗ್ರಾಮದ 4ನೇ ವಾರ್ಡ್  ಸಜ್ಜೆಹೊಲ  ಪ್ರದೇಶದ ಪಕ್ಕದಲ್ಲಿ ಹಾದುಹೋಗುವ ಸಿರಿಗೇರಿಯಿಂದ ಗುಂಡಿಗನೂರು ಮತ್ತು ಹಾವಿನಾಳು ಗ್ರಾಮದ ರಸ್ತೆಯಲ್ಲಿ ಪ್ರತಿನಿತ್ಯ ಗ್ರಾಮದ ವಿವಿಧ ವಾರ್ಡುಗಳ ಚರಂಡಿ ನೀರು ಶೇಖರಣೆಗೊಂಡು ರಸ್ತೆಯಲ್ಲಿ ಹರಿಯುವುದು, ಮತ್ತು ಮಳೆ ಬಂದಾಗ ಹೆಚ್ಚಿನ ನೀರು ಶೇಖರಣೆಗೊಂಡು ಹೊಂಡವಾಗಿ ಪರಿಣಮಿಸುವುದು, ಹಾವಿನಾಳು ಗುಂಡಿಗನೂರು ಮತ್ತು ಈ ಭಾಗದ ಹೊಲ ಗದ್ದೆಗಳಿಗೆ ಹೋಗುವವರು ಅನಿವಾರ್ಯವಾಗಿ ಈ ಹೊಂಡದಲ್ಲಿಯೇ ಸಾಗುವುದು ಅನಿವಾರ್ಯವಾಗಿದೆ. ಬಹುತೇಕ ಗ್ರಾಮದ ಹಲವು ವಾರ್ಡುಗಳಿಂದ ಬಂದು ಇಲ್ಲಿ ಶೇಖರಣೆ ಗೊಳ್ಳುವ ಚರಂಡಿ ನೀರನ್ನು ಇಂಗುವಂತೆ ಮಾಡುವುದು ಅಥವಾ ಬೇರೆ ಕಡೆಗೆ ಸಾಗಿಸುವ ಕೆಲಸವನ್ನು ಮಾಡಬೇಕೆಂದು, ಸುಮಾರು ಮೂರ್ನಾಲ್ಕು ವರ್ಷಗಳಿಂದ ಈ ಭಾಗದ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಾರ್ವಜನಿಕರು ಒತ್ತಾಯ ಮಾಡಿಕೊಂಡು ಬಂದರು ಏನು ಪ್ರಯೋಜನವಾಗುತ್ತಿಲ್ಲವೆಂದು ದೂರಲಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಹೆಚ್ಚಿನ ನೀರು ಈ ರಸ್ತೆಯಲ್ಲಿ ಶೇಖರಣೆಗೊಂಡು ಸಂಚಾರಕ್ಕೆ ತೊಂದರೆಯಾಗಿರುವುದನ್ನು ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಲಕ್ಷ್ಮಿ ಅವರ ಪತಿ ದ್ಯಾವಣ್ಣ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿಎಲ್ ಉಮಾಪತಿ ಇವರು ಈ ರಸ್ತೆಯ ದುರವಸ್ತೆಯ ಬಗ್ಗೆ ಮಾಹಿತಿ ನೀಡಿ ಪ್ರತಿಭಟಿಸಿದರು. ನಂತರ ಈ ಸಮಸ್ಯೆಯ ಕುರಿತು ಸಂಬಂಧಿಸಿದ ಇಲಾಖೆಯ ಇ ಓ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಈಗ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲು ಕ್ರಮ ಕೈಗೊಂಡು ಚುನಾವಣೆಯ ನಂತರ ಶಾಶ್ವತ ಪರಿಹಾರಕ್ಕೆ ಅನುದಾನ ಮುಂಜೂರಾದ ತಕ್ಷಣವೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಸಿದರು. ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ ಶಿವಕುಮಾರ್ ಕೋರಿ ಇವರಿಗೆ ಮಾಹಿತಿ ನೀಡಲಾಗಿ, ಸ್ಥಳಕ್ಕೆ ಭೇಟಿಕೊಟ್ಟು ಕೂಡಲೇ ಜೆಸಿಬಿ ಯಂತ್ರದಿಂದ ಶೇಖರಣೆ ಗೊಂಡಿರುವ ನೀರು ಹರಿದುಹೋಗುವ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.