ಮಳೆ, ಪ್ರಕೃತಿ ವಿಕೋಪ ಪರಿಣಾಮತಡೆಗೆ ಸನ್ನದ್ದರಾಗಿರಲು ಡಿ.ಎಸ್.ರಮೇಶ್ ಸೂಚನೆ

ಚಾಮರಾಜನಗರ, ಮೇ.24:- ಮಳೆ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದಿಂದಉಂಟಾಗ ಬಹುದಾದ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ ಪೂರ್ವ ಸಿದ್ದತೆಯೊಂದಿಗೆ ಅಧಿಕಾರಿಗಳು ಸನ್ನದ್ದರಾಗಿರಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯಾದ್ಯಂತ ಮಳೆ ಪ್ರಾರಂಭವಾಗಿದೆ. ಮಳೆಯಿಂದ ಆಗಬಹುದಾದ ಹಾನಿ ಬಗ್ಗೆ ಅಧಿಕಾರಿಗಳಿಗೆ ಪೂರ್ವ ಮಾಹಿತಿಇರಬೇಕು. ಯಾವ ಪ್ರದೇಶ ಮಳೆ ಪ್ರಕೃತಿ ವಿಕೋಪದಿಂದ ಭಾದಿತವಾಗಲಿದೆ ಎಂಬ ಬಗ್ಗೆ ಪೂರ್ಣ ವಿವರಹೊಂದಿರಬೇಕು. ಮಳೆಯಿಂದ ಸಂಭವಿಸಬಹುದಾದ ಗಂಭೀರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಪೂರ್ವ ಸಿದ್ದತೆ ಕೈಗೊಂಡಿರಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಸುರಿದಿರುವ ಮಳೆಯಿಂದ ಹಾನಿಗೀಡಾಗಿರುವ ತೋಟಗಾರಿಕೆ, ಕೃಷಿ ಬೆಳೆ ಹಾನಿ ಬಗ್ಗೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿಸ್ಥಳ ಪರಿಶೀಲಿಸಿ ಬೆಳೆನಷ್ಟ ಅಂದಾಜು ವರದಿ ಸಲ್ಲಿಸಬೇಕು.
ಮನೆಗಳಿಗೆ ಹಾನಿಯಾಗಿದ್ದಲ್ಲಿ ಆ ಕುರಿತುಕೂಡಲೇ ವರದಿ ನೀಡಬೇಕು. ಮಳೆ ಸಂಬಂಧಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿಯವರುತಾಕೀತು ಮಾಡಿದರು.
ಜಿಲ್ಲಾತುರ್ತು ನಿರ್ವಹಣಾಕೇಂದ್ರವು ದಿನದ 24 ಗಂಟೆಯೂಕಾರ್ಯ ನಿರ್ವಹಿಸಬೇಕು. ಇದೇ ರೀತಿ ತಾಲೂಕು ಮಟ್ಟದಲ್ಲಿಯೂ ತುರ್ತು ನಿರ್ವಹಣಾ ಕೇಂದ್ರಗಳು ಸಹಾಯವಾಣಿ ಮೂಲಕ ಜನರ ನೆರವಾಗಬೇಕು. ಎಲ್ಲಿಯೇ ಮಳೆ ಸಂಬಂಧಿ ವಿಪತ್ತು ಮಾಹಿತಿ ಬಂದಲ್ಲಿ ತುರ್ತು ಕಾರ್ಯಾಚರಣೆ ನಡೆಸಬೇಕು. ಪರಿಹಾರ ಕಾರ್ಯಗಳಿಗೆ ಚುರುಕಾಗಿ ಸ್ಪಂದಿಸಬೇಕು ಎಂದರು.
ಮಳೆ ಪ್ರಮಾಣ ಜಾಸ್ತಿಯಾಗಿ ಜಲಾಶಯಗಳಿಂದ ಹೆಚ್ಚು ನೀರು ಬಿಡುಗಡೆಯಾದರೆ ಕೊಳ್ಳೇಗಾಲ ಭಾಗದ ಕೆಲ ಗ್ರಾಮಗಳು ಪ್ರವಾಹ ಭೀತಿಎದುರಿಸಬೇಕಾಗುತ್ತದೆ. ಇಂತಹ ಗ್ರಾಮಗಳನ್ನು ಈ ಹಿಂದೆಯೂ ಗುರುತಿಸಿ ಅಗತ್ಯಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯೂ ಸಹ ಪ್ರವಾಹ ಎದುರಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನುಈಗಿನಿಂದಲೇ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಕೆರೆಗಳ ಸಂರಕ್ಷಣೆ ಆಗಬೇಕು. ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ ಸ್ವಯಂ ಸೇವಕರೊಂದಿಗೆ ಸನ್ನದ್ದರಾಗಿರಬೇಕು. ರಕ್ಷಣಾ ಸಲಕರಣೆಗಳನ್ನು ಕ್ರೋಢೀಕರಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ವಿಪತ್ತು ಪರಿಸ್ಥಿತಿ ನಿರ್ವಹಣೆಗೆ ಪ್ರವಾಹ ಬಾಧಿತವಾಗಬಹುದಾದ ಆಯಾ ಗ್ರಾಮಗಳಲ್ಲಿ ಸಮಿತಿ ರಚಿಸಿರಬೇಕು. ಸ್ವಯಂ ಸೇವಕರ ರಕ್ಷಣಾ ತಂಡಗಳಿಗೆ ಸೂಕ್ತ ತರಬೇತಿ ಹಮ್ಮಿಕೊಂಡು ಸಜ್ಜುಗೊಳಿಸಬೇಕು. ಸಂತ್ರಸ್ತ ಪ್ರದೇಶಗಳಲ್ಲಿ ಅಗತ್ಯ ಬಿದ್ದರೆಕಾಳಜಿಕೇಂದ್ರ, ವೈದ್ಯಕೀಯ ಸೌಲಭ್ಯ, ಸಂತ್ರಸ್ತರಿಗೆಆರ್ಥಿಕ ನೆರವು ನೀಡಲು ಎಲ್ಲ ಅವಶ್ಯಕ ಮುಂಜಾಗ್ರತಾ ಕ್ರಮಗಳಿಗೆ ಸಿದ್ದರಾಗಿರಬೇಕೆಂದು ಎಂದರು.
ಮಳೆ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರುತುಂಬಿ ಜನವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿಯಲುಚರಂಡಿ, ಕಾಲುವೆ, ಸೇತುವೆ, ಕಲ್ವರ್ಟ್‍ಗಳಲ್ಲಿರುವ ಹೂಳು ತೆಗೆದು ಸ್ವಚ್ಚಗೊಳಿಸಬೇಕು. ತಗ್ಗು ಪ್ರದೇಶಗಳಲ್ಲಿ ನಿಂತ ನೀರನ್ನು ಹೊರ ಹಾಕಲು ಅಗತ್ಯವಿರುವ ವ್ಯವಸ್ಥೆ ಮಾಡಬೇಕು.
ವಿದ್ಯುತ್ ಸರಬರಾಜು ಇಲಾಖೆ ವಿದ್ಯುತ್‍ತಂತಿ ಹಾದು ಹೋಗುವ ಮಾರ್ಗಗಳಲ್ಲಿ ಮಳೆ ಗಾಳಿಗೆ ಯಾವುದೇ ಅನಾಹುತ ಸಂಭವಿಸದಂತೆ ವಹಿಸಬೇಕಿರುವ ಕ್ರಮಗಳಿಗೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಸಿ. ಕೆಂಪರಾಜು, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಜಿಲ್ಲಾ ಅಗ್ನಶಾಮಕ ಅಧಿಕಾರಿ ನವೀನ್, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ ವಿಶ್ವೇಶ್ವರಯ್ಯ, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.