ಮಳೆ ನೀರು ಸಂಗ್ರಹದಿಂದ ನೀರು ಸಮಸ್ಯೆಗೆ ಪರಿಹಾರ

ಕೋಲಾರ,ಮಾ.೩೦: ಮಳೆ ನೀರು ಸಂಗ್ರಹದಿಂದ ಬೇಸಿಗೆಯಲ್ಲಿ ಜನ ಜಾನುವಾರುಗಳ ಬಳಕೆಗೆ ಸಹಾಯಕವಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಡಿ.ನಾಗರಾಜ್ ತಿಳಿಸಿದರು. ಕೋಲಾರ ತಾಲ್ಲೂಕಿನ ಹರಟಿಯಲ್ಲಿ ಭಾರತ ಸರ್ಕಾರದ ಜಲ ಶಕ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ ಏರ್ಪಡಿಸಿದ್ದ, ಮಳೆ ನೀರು ಸಂಗ್ರಹ ಜಾಗೃತಿ ಅಭಿಯಾನ ಕಾರ್ಯಾಗಾರದಲ್ಲಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಳೆ ನೀರು ಸಂಗ್ರಹದಿಂದ ಅಂತರ್ಜಲ ಹೆಚ್ಚಳದ ಜೊತೆಗೆ ಅರಣ್ಯ ಬೆಳಸಬಹುದು. ಕಾಡು ಬೆಳೆಯುವುದರಿಂದ ಮಳೆ ಬರುವಂತೆ ಮಾಡಬಹುದು. ಆದ್ದರಿಂದ ನಾವು ಜಲವನ್ನು ಹೆಚ್ಚು ಸಂಗ್ರಹಣೆ ಮಾಡಲು ಅನುಕೂಲ ಆಗುತ್ತದೆ ಹಾಗೂ ವಾತಾವರಣ ಕೂಡ ತಂಪಾಗಿಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಸಂಘಟಕ ಪ್ರವೀಣ್ ಮಾತನಾಡಿ, ಜನರು ಮರಗಳನ್ನು ಕಡಿಯಬಾರದು. ಅರಣ್ಯ ಉಳಿಸಬೇಕು ಗಿಡಗಳನ್ನು ನೆಡಬೇಕು. ತೊಟ್ಟಿಗಳನ್ನು ನಿರ್ಮಾಣ ಮಾಡುವುದರ ಮೂಲಕ ನೀರನ್ನು ಸಂಗ್ರಹಿಸಿ ಪುನರ್ ಬಳಕೆ ಮಾಡಲು ಸಹಾಯಕವಾಗುತ್ತದೆ. ಆದ್ದರಿಂದ ಮಳೆ ಕೊಯ್ಲಿಗೆ ಪ್ರಾಧಾನ್ಯತೆ ನೀಡಬೇಕು. ಮನೆ ಛಾವಣಿಗಳ ಮೇಲೆ ನೀರನ್ನು ಸಂಗ್ರಹಿಸಬೇಕು ಮತ್ತು ಬಳಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಜಿ.ಶ್ರೀನಿವಾಸ್ ಮಾತನಾಡಿ ಮಳೆ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಪ್ರತಿನಿತ್ಯ ಬಳಸುವ ನೀರು ಕಲುಷಿತಗೊಂಡಿರುವ ಸಂಭವ ಇರುವುದರಿಂದ ಪ್ರತಿ ಮನೆಗಳಲ್ಲಿ ಮಳೆ ನೀರು ಕೊಯ್ಲು ಮಾಡಿ ಬಳಸುವುದರಿಂದ ಆರೋಗ್ಯ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕರುಗಳಾದ ಕೃಷ್ಣಪ್ಪ, ಗೋವಿಂದಪ್ಪ , ಸೊಣ್ಣೇಗೌಡ, ಮುನಿಯಪ್ಪ, ಮೀನಾ, ಮಮತಾ ಮತ್ತಿತರರು ಉಪಸ್ಥಿತರಿದ್ದರು.