ಮಳೆ ನಿರೀಕ್ಷೆಯಲ್ಲಿ ಗ್ರಾಮೀಣ ಭಾಗದ ರೈತರು


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.29. ಕಳೆದ ವರ್ಷ ಈ ವೇಳೆಗಾಗಲೇ ಮುಂಗಾರಿನ ಮಳೆಯು ಸಮೃದ್ಧವಾಗಿ ಸುರಿದು ನೀರಾವರಿ ಮತ್ತು ಮಳೆಯಾಶ್ರಿತ ಜಮೀನುಗಳಲ್ಲಿ ವಿವಿಧ ಬೆಳೆಗಳು ನಳನಳಿಸುತ್ತಿದ್ದವು. ರೈತರು ಕೈತುಂಬ ಕೆಲಸದಲ್ಲಿ ತೊಡಗಿ ತಮ್ಮ ತಮ್ಮ ಜಮೀನುಗಳಲ್ಲಿ ಕಾರ್ಯನಿರತರಾಗಿದ್ದರು, ಆದರೆ ಈವರ್ಷದ ಮುಂಗಾರು ಇಲ್ಲಿಯವರೆಗೂ ಬಿತ್ತನೆ ಮಾಡುವ ಒಂದು ಹಸಿಮಳೆಯನ್ನು ಸುರಿಸಿಲ್ಲ. ಈಗ ಆಷಾಡ ಪ್ರಾರಂಭಗೊಂಡಿದ್ದು ಗಾಳಿಯ ರಭಸವು ಜೋರಾಗಿದ್ದು ಮುಂದೆ ಮಳೆಯ ಸೂಚನೆಯೂ ಸಿಗುತ್ತಿಲ್ಲವೆಂದು ರೈತರು ಹಣೆಗೆ ಕೈಇಟ್ಟು ಆಕಾಶದ ಕಡೆ ಮುಖಮಾಡಿ ಮೋಡಗಳನ್ನು ಹುಡುಕುವಂತಾಗಿದೆ. ತಮ್ಮ ಜಮೀನುಗಳಲ್ಲಿ ಯಾವುದೇ ಕೆಲಸ ಕಾರ್ಯಗಳಿಲ್ಲದ್ದರಿಂದ ಹೊಲದ ಕಡೆಗೆ ಹೋಗಲೂ ಮನಸ್ಸಿಲ್ಲದೇ ಮನೆಯಲ್ಲೇ ಹೊತ್ತು ಕಳೆಯುವಂತಾಗಿದೆ.
ಭೂಮಿ ಹದಮಾಡಿಕೊಂಡು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಂಗಾರು ಮಳೆಯ ಭರವಸೆಯು ಹುಸಿಯಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಎರೆಡೆರಡು ಬಾರಿ ಮಡಿಕೆ, ಕುಂಟೆ ಹರಗಿಕೊಂಡು ಹಸನು ಮಾಡಿ ಬೀಜ ಬಿತ್ತನೆಗೆ ಕಾಯುತ್ತಿರುವ ರೈತರು ಮುಂಗಾರು ಕೈಕೊಟ್ಟಿದ್ದರಿಂದ ಇನ್ನು ಮುಂದಿನ ಸುಗ್ಗಿಯ ಮಳೆ ಕೈಹಿಡಿಯುವುದೇನೋ ಎನ್ನುವ ಆಶಾಭಾವನೆ ಹೊತ್ತಿದ್ದಾರೆ. ಮಳೆ ಇಲ್ಲದೇ ಭೂಮಿಯಲ್ಲಿ ಅಂತರ್ಜಲವೂ ಕುಂಟಿತಗೊಂಡು ಬೋರ್ ಇರುವ ರೈತರ ಜಮೀನುಗಳಲ್ಲಿನ ಈಗಾಗಲೇ ನಾಟಿ ಮಾಡಿರುವ ಮೆಣಸಿನಕಾಯಿ ಬೆಳೆಯು ನೀರಿನ ಅಭಾವದಿಂದ ಮಳೆ ಇಲ್ಲದೆ ಬಾಡುತ್ತಿದೆ ಕೆಲ ರೈತರ ಹೊಲಗಳಲ್ಲಿ ಒಣಗಿ ಕೈಕೊಟ್ಟಿದೆ. ಮಾನ್‍ಸೂನ್ ಮಳೆಯು ರಾಜ್ಯದ ಕೆಲವು ಜಿಲ್ಲೆಗೆ ತನ್ನ ಪ್ರಭಾವ ತೋರಿದರೆ ಬಹುತೇಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯಾವುದೇ ಪರಿಣಾಮ ಬೀರದೇ ಈ ಭಾಗದ ರೈತರು ಮಳೆಯ ಅಭಾವವನ್ನು ಎದುರಿಸುತ್ತಿದ್ದಾರೆ.