ಮಳೆ ನಡುವೆ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ: ಬೆಳೆಹಾನಿ ಪರಿಹಾರಕ್ಕೆ ಒತ್ತಾಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.12- ಮಳೆ ನಡುವೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘವು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ ಘಟನೆ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಚಾಮರಾಜನಗರದ ಸೋಮವಾರಪೇಟೆ ಬಳಿ ನಡೆಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿತಡೆದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಈ ವೇಳೆ ಭಾಗ್ಯರಾಜ್ ಮಾತನಾಡಿ, ರೈತರಿಗೆ ಬರ ಪರಿಹಾರ ನೀಡುವಲ್ಲಿ ಸರ್ಕಾರ ವೈಜ್ಞಾನಿಕ ವಿಧಾನವನ್ನು ಅನುಸರಿಸಿಲ್ಲ ಕಳೆದ ಮೂರು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಲಕ್ಷಾಂತರ ಹೆಕ್ಟರ್ ಪ್ರದೇಶದ ಬಾಳೆ, ಕಬ್ಬು, ತೆಂಗು, ಮೆಕ್ಕೆಜೋಳ ನಷ್ಟ ನಾಶವಾಗಿದ್ದು ವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರವನ್ನು ಘೋಷಿಸಬೇಕು, ಭೀಕರ ಬಿರುಗಾಳಿಯಿಂದ ನೊಂದಿರುವ ರೈತರ ಸಾಲವನ್ನು ರಾಜ್ಯ ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡಬೇಕು, ಪ್ರತಿಎಕರೆ ಬಾಳೆ ಬೆಳೆ ನಷ್ಟಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ದರ ನೀಡಬೇಕು ಹಾಗೂ ಬರ ಪರಿಹಾರವನ್ನು ತಾರತಮ್ಯ ಇಲ್ಲದೆ ಎಲ್ಲಾ ರೈತರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಕಳೆದ ಸಾಲಿನ ಪ್ರತಿಟನ್‍ಗೆ 150 ರೂಪಾಯಿಯಂತೆ ಸರ್ಕಾರ ಆದೇಶದ ಪ್ರಕಾರ ರಾಜ್ಯದಲ್ಲಿ 950 ಕೋಟಿ ರೂಪಾಯಿ ರೈತರಿಗೆ ಬರಬೇಕು ಕಳೆದ ಸಾಲಿನ ಕಾರ್ಖಾನೆಗಳಿಂದ ಲಾಭಾಂಶವನ್ನು ಹಂಚಿಕೆ ಮಾಡಿಸಬೇಕು ಹಾಗೂ ಖಾಸಗಿ ಮತ್ತು ಸಾಲ ಪಡೆದ ರೈತರಿಗೆ ಟ್ಯಾಕ್ಟರ್ ಗಳನ್ನು ಜಪ್ತಿ ಮಾಡಿ ಬೇರೆ ರಾಜ್ಯಗಳಿಗೆ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿವೆ ಬ್ಯಾಂಕುಗಳು ಬರದಿಂದ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 10 ರೂಪಾಯಿಯನ್ನು ಕೊಡಿಸಲು ಕ್ರಮ ವಹಿಸಬೇಕು ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಇನ್ನು, ರಾಷ್ಟ್ರೀಯ ಹೆದ್ದಾರಿತಡೆದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.