ಮಳೆ: ತಹಶೀಲ್ದಾರರಿಂದ ಭೇಟಿ, ಪರಿಶೀಲನೆ

ಲಕ್ಷ್ಮೇಶ್ವರ,ಸೆ.7: ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ವಿಪರೀತ ಮಳೆಯಿಂದಾಗಿ ಗುಂಜಳ ರಸ್ತೆಯಲ್ಲಿರುವ ಸಾವಿರಾರು ಎಕರೆ ಜಮೀನುಗಳಲ್ಲಿನ ನೀರು ಗ್ರಾಮಕ್ಕೆ ನುಗ್ಗಿ ನಿವಾಸಿಗರು ಪರದಾಡಿದ ಘಟನೆ ಜರುಗಿದ ಹಿನ್ನೆಲೆಯಲ್ಲಿ ಮಂಗಳವಾರ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರರು ಗ್ರಾಮದ ತುಂಬೆಲ್ಲ ಸಂಚರಿಸಿ ಮನೆಗಳಿಗೆ ಭೇಟಿ ನೀಡಿ ನಿವಾಸಿಗರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಗುಂಜಳ ಮತ್ತು ಯತ್ನಳ್ಳಿ ಮಧ್ಯದ ರಸ್ತೆಯಲ್ಲಿ ಎರಡು ಬದಿಗೂ ಕಾಲುವೆಗಳು ತುಂಬಿಕೊಂಡು ಜಮೀನಿನಲ್ಲಿನ ನೀರು ನೇರವಾಗಿ ಮಾಡಳ್ಳಿ ಹಳ್ಳಕ್ಕೆ ಸೇರ ಬೇಕಾಗಿತ್ತು ಆದರೆ ಕಾಲುವೆ ಹೂಳು ತುಂಬಿರುವುದರಿಂದ ನೀರು ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ ಎಂದರು.
ತಹಶೀಲ್ದಾರರು ಜನರ ಸಮಸ್ಯೆ ಆಲಿಸಿ ಕೂಡಲೇ ಕಾಲುವೆ ಹೂಳು ತೆಗೆಯಲು ಕ್ರಮ ಕೈಗೊಳ್ಳುವದಾಗಿ ಹೇಳಿದರು. ಈ ಕುರಿತು ಗ್ರಾಮದ ಶೇಖರ ಗೌಡ ಪಾಟೀಲ್ ಅವರು ಪ್ರತಿಕ್ರಿಯಿಸಿ ಒಂದು ವಾರದಲ್ಲಿ ಎರಡು ಬಾರಿ ಈ ರೀತಿ ಅವಾಂತರವಾಗಿದ್ದು ಕೇವಲ ಹೇಳಿಕೆ ನೀಡಿ ಹೋಗುತ್ತಿದ್ದು ಸಮಸ್ಯೆಯಾಗಿ ಉಳಿದಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ದ್ಯಾಮನಗೌಡ್ರು ದೋಣಿ, ಎಸ್.ಎಸ್ ರಾಯನಗೌಡರ, ಸಿ.ಎನ್ ಬೆಟದೂರ, ಗಂಗಾಧರ ಸಂಧಿಮನಿ, ಪ್ರಭು ಸೂರಣಗಿ, ಜಯಂತಗೌಡ ಪಾಟೀಲ, ಎಫ್.ಸಿ ಸಂಕನಗೌಡ, ಬಿ.ಎಫ್ ಪಾಟೀಲ, ಶಿವರಾಜ ಜಿನ್ನೂರ, ಆರ್.ಬಿ ಕುಂದಗೋಳ ಸೇರಿದಂತೆ ಅನೇಕರಿದ್ದರು.